ಬಹಳಷ್ಟು ಸಿನಿಮಾಗಳಲ್ಲಿ ಒಂದು common ಸೀನು …
“ನೋಡು ಇಲ್ನೋಡು, ನನ್ನ ಕಣ್ಣಲ್ಲಿ ಕಣ್ಣಿಟ್ಟು ಉತ್ತರ ಕೊಡು …”
– ತಾಯಿಯೋ ಪ್ರೆಯಸಿಯೋ ಹುಡುಗನ ಭುಜವಿಡಿದು ಅಲುಗಾಡಿಸುತ್ತಿರುತ್ತಾಳೇ ..
ನೋಡಿಬಿಟ್ಟರೆ ಎಲ್ಲಿ ಸತ್ಯ leak ಆಗಿಬಿಡುತ್ತೋ ಅನ್ನುವಂತೆ ವಿಲವಿಲ ಒದ್ದಾಡುತ್ತಾ ಅವನು ಕಣ್ತಪ್ಪಿಸುತ್ತಿರುತ್ತಾನೆ …
ಆವಾಗೆಲ್ಲ ನನ್ನ ಮನಸಲ್ಲಿ ಮೂಡೋ ಪ್ರಶ್ನೆ ಕಣ್ಣಲ್ಲಿ ಸತ್ಯ ಮತ್ತು ಮಾತು ಕೇಳಿಸುತ್ತದ ??..
ಹಿಂದೆಯೇ ಒಂದು ಪುಟ್ಟ ಜೋಕು .
ಪೋಲಿಸೊಬ್ಬ ಕಳ್ಳನನ್ನು ಹಿಡಿದು -“ನೋಡು ಇಲ್ನೋಡು ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳು, ನೀನು ಕಳ್ಳತನ ಮಾಡಿದೆಯ ?” ಎನ್ನುವುದು
ಅತವ
“your honour ನೋಡಿ ಇವನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಸತ್ಯ ಕಾಣಿಸುತ್ತಿದೆ ” ಎನ್ನುವುದು .
ಆಪ್ತ ಸಂಬಂಧವೆ ಬೇರೆ. ಹೌದು …. ಆದರೆ Mask ಧರಿಸಿಕೊಂಡು ವ್ಯವಹಾರಕ್ಕಿಳಿಯುವ ಬಹುತೇಕರ ಕಣ್ಣಲ್ಲೂ ವಂಚನೆ
ಕಣ್ಣುಗಳು ಮತ್ತು ತುಟಿಗಳೇ ಇರಬೇಕು ಕವಿಗಳನ್ನು ಇನ್ನಿಲ್ಲದಂತೆ ಪ್ರಚೋದಿಸಿ ಕಾಡಿಸಿರುವುದು …ಕವನ, ಹಾಡುಗಳಲ್ಲೆಲ್ಲ ಬರಿ ಅವುಗಳ ವರ್ಣನೆ, ಹೊಗಳಿಕೆಯೇ . ತುಟಿ ವಿಷಯಕ್ಕೆ ಬಂದರೆ ಚೂರು ಕಸಿವಿಸಿ ನನಗೆ , ಅಶ್ಲೀಲತೆ ಮೆತ್ತಿಕೊಂಡು ಬಿಡುತ್ತದೆಯೇನೋ ಎನ್ನುವಂತೆ .
ಆದರೆ ಕಣ್ಣುಗಳು ನನ್ನ ಪಾಲಿಗೆ ಪ್ರೀತಿ , ಮಮಕಾರದ ಸಾಗರ .
ಕಣ್ಣುಗಳು ಮಿಂಚುವ ನಕ್ಷತ್ರಗಳು, ಜೋಡಿ ಕವನಗಳು, ಮಧ್ಯದ ಬಟ್ಟಲುಗಳು, ಹಾರೋ ಚಿಟ್ಟೆಗಳು ಅಂತೆಲ್ಲ ಮೊದಲು ಓದುವಾಗ ಹೌದ ಎನ್ನುತ್ತಾ ಕಾಲೆಳೆದುಕೊಂಡು ಕುರ್ಚಿಮೇಲೆ ಕೂತುಕೊಳ್ಳುತ್ತಿದ್ದೆ .
ಅದು ವಸಂತಕಾಲ… ಯಾವ ಕಣ್ಣುಗಳು ಪುಸ್ತಕದಲ್ಲಿನ ಹೋಲಿಕೆಗಳಿಗೆ ಸೂಕ್ತ ಅಂತ relate ಮಾಡಿಕೊಂಡು ಹುಡುಗಿಯರನ್ನು observe ಮಾಡುತಿದ್ದೆ . ಮೀನಿನಂತ ಕಣ್ಣುಗಳು ಸಕ್ಕತ್ತು ರೋಮ್ಯಾಂಟಿಕ್ ಆಗಿ ಕಂಡವು…ಕಡುಗಪ್ಪು ,ನೀಲಿ , ಹಸಿರು ಬಣ್ಣದ ಕಣ್ಣುಗಳು ವಿಶೇಷ ಎನಿಸುತ್ತಿದ್ದವು .
ನನ್ನನ್ನು ನಾನು ಪ್ರೀತಿಸಿಕೊಳ್ಳಬೇಕಿದ್ದ ಕಾಲ ಅದು .ಯಾವ ಹೋಲಿಕೆಗೂ ಒದಗದ ನಾರ್ಮಲ್ ಕಣ್ಣು ನನ್ನದು ಅನಿಸುತ್ತಿರುವಾಗಲೇ ಅದಕ್ಕೊಂದಿಷ್ಟು ಕಾಡಿಗೆ ತೀಡಿ , eyeliner ಹಚ್ಚಿ, mascara ಮೆತ್ತಿ ನೋಡಿಕೊಳ್ಳುವಾಸೆ.. ಅದ್ಯಾಕೋ ಕೆಲವೊಂದು ವಸ್ತುಗಳೇ ಹಾಗೆ ಸುಮ್ಮನೆ ಮೋಹ ಹುಟ್ಟಿಸಿಬಿಡುತ್ತವೆ.
ನೀಲಿ ನನ್ನ ಪಾಲಿನ ಅಗಾದ ಸೆಳೆತ .. ನೀಲಿ ಹೂವು, ನೀಲಿ ಕಡಲು, ನೀಲಿ ಆಕಾಶ , ನೀಲಿ eyeliner …
ನಮ್ಮ ಮನೆಯ ಗಂಡಸರಿಗೆ ಮನೆಯಹೆಣ್ಮಕ್ಕಳು ಗಾಡವಾಗಿ ಕಣ್ಕಪ್ಪು ಹಚ್ಚುವುದು ಒಂದುರೀತಿ ವರ್ಜೆ !!!
ಅಪ್ಪಿತಪ್ಪಿ ಬಳಿದುಕೊಂಡು ಹೊರಗೆ ಬಂದು ನಿಂತರೆ ದುರದುರ ನೋಡಿ , ಸಿಡಿಮಿಡಿಗುಟ್ಟುಬಿಡುತ್ತಿದ್ದರು.
“ಅದೇನು ಹಾಗೆ ಬಳ್ಕೊಂಡಿದ್ದೀಯ ,ದೆವ್ವದ ತರಹ! ಮೊದಲು ಹೋಗಿ ತೆಗಿ “
ಅಳು ಬಂದುಬಿಡುತ್ತಿತ್ತು ಅಂತ ತಪ್ಪು ಏನು ಮಾಡಿದೆ ಅಂತ
ಅರ್ಥಾಗುತಿತ್ತು ಅಪ್ರಾಪ್ತ ಪದಪ್ರಯೋಗವಷ್ಟೇ ,ಅದು ದೆವ್ವದ ತರಹ ಅಲ್ಲ …
ಕರೆವೆಣ್ಣಿನ ತರಹ…
ಆದರು ನನಗೆ ತೀರದ ಮೋಹ…ಅಪ್ಪ ಮನೆಯಲ್ಲಿ ಇಲ್ಲದಾಗ ಹಚ್ಚಿಕೊಂಡು ಕನ್ನಡಿ ಎದುರು ನಿಲ್ಲೋದು, ಫೋಟೋ ತೆಗೆಸಿಕೊಳ್ಳೋದು.
ಅದು ಅಕ್ಕನ ಮದುವೆ.ಅಪ್ಪನ ಎಲ್ಲ ಹದ್ದುಬಸ್ತನ್ನು ಮೀರಿ ಇನ್ನಿಲ್ಲದಂತೆ ಸಿಂಗರಿಸಿಕೊಂಡು ಬಿಟ್ಟಿದ್ದೆ.ಕೆಂಪು ಸೀರೆ, ಅಲೆಗಳಂತೆ ತಿರುಪಿ ಇಳೆ ಬಿಟ್ಟುಕೊಂಡಕೂದಲು, ಕೆಂಪು ಲಿಪ್ಸ್ಟಿಕ್ , ಕಪ್ಪು ಕಾಡಿಗೆ, ರೋಸಿ ಬ್ಲಶ್!!
ಮೊತ್ತಮೊದಲ ಬಾರಿಗೆ ಹಿಂದಿಯ ರೇಖಾಳಂತೆ ಬೋಲ್ಡ್ ಆಗಿ decorate ಆಗಿದ್ದೆ .ತಂತಾನೇ ಅಡರಿಕೊಂಡ ವಿಪರೀತ ದರ್ಪ, ಜಂಭದ ಸೊಕ್ಕು ..
ರೂಮಿನಿಂದ ಹೊರಟು ಸ್ಟೇಜ್ ಮೇಲೆ ನಡೆದು ಬರುತ್ತಿದ್ದರೆ ಸುಂದರಿಯ ಗತ್ತು …
ಗೊತ್ತು ನನಗೆ ಚೆನ್ನಾಗಿ ಗೊತ್ತು .ಅಪ್ಪ ಮಿಸುಕಾಡದೆ ಇರುವುದಿಲ್ಲ .
ಆದರು ಧೈರ್ಯವಾಗಿ ಎದುರುಹೋಗಿ ಹಲ್ಲು ಗಿಂಜುತ್ತ ನಿಂತವಳ ಮೇಲೆ ಸೆರಗು ಜಾರಿಹೋಗಿದೆಯೇನೋ ಎನ್ನುವಷ್ಟು ಕುಪಿತರಾದರು ಅಪ್ಪ .ಮೊದಲು ಹೋಗಿ ಲಿಪ್ಸ್ಟಿಕ್ ಕಮ್ಮಿ ಮಾಡಿಕೊಂಡು ಬಾ, ಸಕ್ಕತ್ತು ಓವರ್ ಆಯಿತು ಅಂತ ಉಗಿದರು .
ಅವತ್ತು ಯಾವುದನ್ನು ಕಡಿಮೆ ಮಾಡೋ ಮೂಡಲ್ಲಿ ಇರಲೇ ಇಲ್ಲ ನಾನು.ನನ್ನನ್ನು ಆ ಅವತಾರದಲ್ಲಿ ಎಂದಿಗೂ ನೋಡದವರು ‘ಹೇಯ್ ಸಕ್ಕತಾಗಿ ಕಾಣ್ತಿದ್ಯ ಎಂದ್ದಿದ್ದರು .ನಮ್ಮೂರಿನ ಕೆಲಸದಾಳು heroin ನ ಕಂಡು ಸಂಭ್ರಮಿಸುವಂತೆ ಕೈ ಎತ್ತಿ ಬೀಸಿ wish ಮಾಡಿದ್ದ ..
ಆದರು ಅಪ್ಪನ ಅಂಕುಶವನ್ನು ಮೀರುವ ಹುಚ್ಚು ಧೈರ್ಯವಿರಲಿಲ್ಲ .ಯಾಕಿಂಗೆ ಆಡ್ತಾರೋ, ಎಲ್ಲ normal ಆಗೇ ಇದ್ದರು ಅಂತ ಬಡಬಡಿಸಿಕೊಂಡೆ ಒಂದೆರಡು ಕೋಟ್ ಕಮ್ಮಿ ಇಳಿಸಿದೆ .
ಊರೆಲ್ಲ ಹೊಗಳಿದ್ದರು ಹೆಚ್ಚು ಕಮ್ಮಿ ಒಂದು ವರ್ಷದವರೆಗೂ ಆಲ್ಬಮ್ ಮೊಗಚಿಹಾಕುವಾಗಲೆಲ್ಲ ಅಪ್ಪ, ಚಿಕ್ಕಪ್ಪ ಏನೇ ಆದರು ಅವತ್ತು ನಿಂದು ಮೇಕ್ಅಪ್ ಜಾಸ್ತಿ ಆಗಿತ್ತು ಅಂತ ಉರಿಯುತ್ತಿದ್ದರು.
ಶಾಲೆಯಲ್ಲಿದ್ದಾಗ ಪಕ್ಕದವರ ಮೇಲೆ ಕೋಪಮಾಡಿಕೊಂಡು ಕಣ್ಣಗಲಿಸಿ ಗದರುತ್ತಿದ್ದರೆ , ದೆವ್ವ ನೋಡಿ ಬೆಚ್ಚಿದಂತೆ , ಅಮ್ಮ ನೀನು ಬೇಕಾದ್ರೆ ಒಡೆದುಬಿಡು ಆದರೆ ಹೀಗೆಲ್ಲ ಕಣ್ಣುಬಿಡಬೇಡ, ಭಯ ಆಗುತ್ತೆ ಅಂತ ಅಂದುಬಿಡುತ್ತಿದ್ದರು.
ಬೆಕ್ಕಿನ ಕಣ್ಣು ಅಂದವರು ಇದ್ದರು, ಹತ್ತಿರದಿಂದ ನೋಡಿದರೆ retina structure ಸ್ಪಷ್ಟವಾಗಿ ಸ್ಟಡಿ ಮಾಡಬಹುದಿತ್ತು .
ಕ್ಯಾಂಪಸ್ recruitment ಟೈಮ್ನಲ್ಲಿ ಮತ್ತು ಕೆಲ್ಸಕ್ಕೆ ಸೇರಿದ ತರುವಾಯ , softskills training ಅಂತ ಒಂದು ನಡೆಯುತ್ತದೆ .ನಮ್ಮ ಗಾಂಪತನಕ್ಕೆ professional ಮೇಕ್ ಓವರ್ ನೀಡುವ ಪ್ರಯತ್ನ .
ಮೊತ್ತಮೊದಲ ಪಾಠ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಬೇಕು .ಕಣ್ಣು ನಿಮ್ಮ ವ್ಯಕ್ತಿತ್ವದ ಆತ್ಮವಿಶ್ವಾಸವನ್ನು ತೋರಿಸುತ್ತದೆ .ಗುಂಪಿನಲ್ಲಿ ಮಾತಾಡುವಾಗ ಎಲ್ಲರ ಕಡೆಯೂ ತಿರುಗುತ್ತಾ ಮಾತಾಡಬೇಕು .
ಕಣ್ಣಲ್ಲಿ ಕಣ್ಣಿಟ್ಟು ಮಾತಾಡೋದು ಅಷ್ಟು ಸುಲಭವ, ಅಪ್ಪನ ಮಗಳ ಪ್ರಶ್ನೆ ! ಹೆಣ್ಣಿನ ತೊಳಲಾಟವೋ ಆತ್ಮವಿಶ್ವಾಸದ ಕೊರತೆಯೋ ….
ಜನರ ಜೊತೆ ಹೆಚ್ಚೆಚ್ಚು ಒಡನಾಡಬೇಕಾದ ನೌಕರಿಯಲ್ಲಿರುವವರಿಗೆ ಅನುಭವವೇ ಟ್ರೇನಿಂಗ ನೀಡಿರುತ್ತದೆ .
ಟೀಚೆರು , ಡಾಕ್ಟರು , ರಾಜಕಾರಣಿಗಳು , ಪೋಲಿಸೋರು ,ಲಾಯರುಗಳಿಗೆ ಎಷ್ಟೆಷ್ಟು ಆಂಗಲ್ ನಲ್ಲಿ pupil ತೆರೆದರೆ, ಎಷ್ಟು ಎತ್ತರಕ್ಕೆ ಉಬ್ಬು ಏರಿಸಿದರೆ , ಎಷ್ಟು ಕತ್ತು ಗುನಕುಹಾಕಿದರೆ, ಎಷ್ಟು ಕೈ ಆಡಿಸಿದರೆ ನೋಡುವವರಿಗೆ ಏನೇನು ರವಾನೆಯಾಗುತ್ತದೆ, ಅರ್ಥ ತಲುಪುತ್ತವೆ ಗೊತ್ತಿರುತ್ತದೆ .
ನಮ್ಮದು ವಿಚಿತ್ರ professionnu .ಇಡಿ ದಿನ ಒಂಬತ್ತು ಗಂಟೆ ಕಂಪ್ಯುಟರಿನ ಸ್ಕ್ರೀನಿಗೆ ಕಣ್ಣನೆಟ್ಟು ನಿರ್ಭಾವುಕವಾಗಿ ಮಾಡುವ ಕೆಲಸ .ಚಾಟ್, ಇಮೇಲ್ , ಕಾಲ್ ನಲ್ಲಿ ಮಾತು .
ಪಕ್ಕ ಇದ್ದವರನ್ನು ಕಣ್ಣಲ್ಲಿ ನೋಡದೆ ಮಾತಾಡುತ್ತಾ ತರಾತುರಿಯಲ್ಲಿ ಕುಟ್ಟುವ ಕೆಲಸ .
ಕಣ್ಣುಗಳ ಬಗ್ಗೆ ಕತೆಗಳಿದ್ದವು .
ಆ ಹಾಹಾ…!! ಮಾಯಾಂಗನೆ ನೋಡು ಕಣ್ಣಲ್ಲೇ ಮರಳು ಮಾಡಿ ಹೆದರಿಸಿ ಗಂಡನನ್ನು ಕಟ್ಟಿಹಾಕಿಬಿಟ್ಲು ಅಂತ ಬೈದುಕೊಳ್ಳುತಿದ್ದದ್ದನ್ನು ಕೇಳಿದ್ದೆ .
ದಿಗಿಲಿಗೆ ಕೆಕರುಪಕರಾಗಿ ಬಿಟ್ಟಗಣ್ಣುಬಿಟ್ಟಂತೆ ನಿಂತು ಬಿಡುತ್ತಿದ್ದ ಅಮ್ಮನನ್ನು ತೋರಿಸಿ ನಗುತ್ತ ಅಪ್ಪ ಆಡಿಕೊಳ್ಳುತಿದ್ದರು…ನೋಡು ಪಾಪು 60 ಕ್ಯಾಂಡಲ್ ಬಲ್ಬು ಹೇಗೆ ಹೊಳಿತಾಯಿವೆ …!!
ದುನಿಯಾ ಸಿನಿಮಾದಲ್ಲಿ ಕೇಳಬಾರದ್ದು ಕೇಳಿ ದುರುಗುಟ್ಟಿ ನೋಡಿಸಿಕೊಂಡ ವಿಜಿ ಕೂಡ ಬಲ್ಬು ಪಳ್ ಅಂತವೇ ಅಂದಾಗ ಅಪ್ಪನನ್ನು ನೆನೆಸಿಕೊಂಡು ಪಕಪಕ ನಕ್ಕಿದ್ದೆ..
ಕೆಟ್ಟತರ್ಕದ ಹುಡುಗರು ‘ನೀವ್ ಬಿಡ್ರಮ್ಮ ಹೆಣ್ಮಕ್ಕಳು ಅತ್ತು ಆದರು ಕೆಲಸ ಜಯಿಸುತ್ತೀರಿ ” ಅಂತೆಲ್ಲ ಅನ್ನುವಾಗ ಅದ್ಯಾಕೆ ಹೆಣ್ಣು ಮಕ್ಕಳ ಸಾಧನೆ, ಗೆಲುವನ್ನು ಈ ರೀತಿ ವಿಶ್ಲೇಷಿಸಿ ತಮ್ಮ ಸೋಲು ಸರಿಮಾಡ್ಕೊತಾರೋ ಅಂತ ಕೋಪ ಬರುತ್ತಿತ್ತು ..ಆ ತಾರತಮ್ಯ ಮೀರೋಕೆ ನಗು, ಅಳುವನ್ನು ಬೇರೆ ರೀತಿಲಿ ಉಪಯೋಗಿಸಿಕೊಳ್ಳಬಾರದು ಎಂದು ನನಗೆ ನಾನೇ ಅಣೆಕಟ್ಟುಹಾಕಿಕೊಂಡೆ.
ನೋಡ ಬರುವ ಗಂಡುಗಳನ್ನು ಕತ್ತು ಎತ್ತಿ ನೋಡುವುದ ಹುಡುಗಿಯರ ಸಮಸ್ಯೆ …..ನಾನು ಮಾತ್ರ ಆರಾಮಾಗಿ ನೋಡುತಿದ್ದೆ… ಎರಡನೇ ಬಾರಿ ವಾಪಸ್ಸು ಬಂದಾಗಲೇ ಕಸಿವಿಸಿ ಆಗುತ್ತಿದ್ದದ್ದು ..ತಬ್ಬಿಬ್ಬುಗೊಳ್ಳುತಿದ್ದದ್ದು.
ನನ್ನ ಕಣ್ಣುಗಳನ್ನು ಆಳವಾಗಿ ಓದಿ ವಿಶ್ಲೇಷಿಸಿದ ಮೊದಲ ಗಂಡಸು ಅಪ್ಪನೆ ಇರಬೇಕು…
ಮೊದಲೇ ಬೆಳ್ಳಗಿರುವ ಮುಖದ ಮೇಲೆ, ಗೂಬೆ ತರಾ ಹೊರಚಾಚಿರುವ ಕಣ್ಣುಗಳಿಗೆ ಕಾಡಿಗೆ ಬೇರೆ ಅತಿಯಾಗಿ ಹಚ್ಚಿದರೆ , ಎತ್ತಿ ಎತ್ತಿ ಕಾಣುತ್ತದೆ ಎನ್ನುವ explanation ಕೊಟ್ಟು , ನೀನು ಸಿಂಪಲ್ ಆಗಿದ್ರೇನೆ ಜಾಸ್ತಿ ಚೆನ್ನಾಗಿ ಕಾಣ್ತೀಯ ಅನ್ನೋ ತುಪ್ಪಾನು ಸವರಿದ್ದರು .ಹೆಣ್ಣುಮಕ್ಕಳ ತಂದೆ ತಾಯಿಯರಿಗೆ ಎಂತೆಂತ ಸಮಸ್ಯೆಗಳಿರುತ್ತವಪ್ಪ ದೇವರೇ ..
ಅದೊಂದು ದಿನ ಯಾವುದೋ ಮಾತಿಗೆ ವಿಪರೀತ ಹರ್ಟ್ ಆಗಿ ರೋಧಿಸುತ್ತಿದ್ದೆ .ಅಪ್ಪನಿಗೆ ನಾನು ಬೆಳೆದ ಹುಡುಗಿಯಾದರೂ, ನನಗೆ ಅವರು ಅಪ್ಪಾನೆ.. ಎರಡು ವರ್ಷದ ಮೊಗು ಗದರಿದ ತಾಯಿಯ ಬಳಿ ಓಡಿ , ಹಿಡಿದು ಅತ್ತು, ಸಿಂಪತಿ ಗಿಟ್ಟಿಸಿಕೊಂಡು ಮುದ್ದುಮಾಡಿಸಿಕೊಳ್ಳುವಂತೆ , ಬೈದ ಅಪ್ಪನ ಪಕ್ಕಕೆ ಹೋಗಿ ಅಳುತ್ತ ಮಲಗಿದ್ದೆ .
ನನಗೆ ನೋಡೋಕೆ ಆಗಲ್ಲ, ಅಳಬೇಡ ನೀನು …. ಕಣ್ಣುವರೆಸಿದ್ದರು…ಕರುಳಬಳ್ಳಿ ಸಂಕಟ.
ನೀನು ಅಳುತ್ತಿದ್ದರೆ ಕೆಂಡದ ಬಿಸಿಯಂತೆ ಕಂಗಳಿಂದ ಬಿಸಿ ಹೊರಟು ನನ್ನ ಸುಡುತ್ತವೆ ಅಂದರು .
ದಂಡಿಗೆ ಹೆದರದ, ದಾಳಿಗೆ ಹೆದರದ , ಗಳಗಂಟೆ ಪೂಜಾರಿಗೆ ಹೆದರದ , ಅಮ್ಮನಿಗೆ, ಕಾನೂನು, ರೂಲ್ಸಿಗೆ , ಕೋರ್ಟ್ ಕೇಸುಗಳಿಗೆ ,ಯಾವುದಕ್ಕೂ ಹೆದರದ ಅಪ್ಪ, ಹೆದರುತ್ತಿದ್ದದ್ದು ತನ್ನದೇ ಹೆಣ್ಣು ಮಕ್ಕಳ ಕಣ್ಣೀರಿಗೆ…ಎಂತ ಸಂವೇದನಶೀಲಗಂಡಸು !
ಯಾವುದಕ್ಕೂ ಇರದ ಶಕ್ತಿ ಹೆಣ್ಣಿನ ಕಣ್ನೀರಿಗಿದೆ ಎಂದು ಹೇಳಿದವರೇ ಅಪ್ಪ.
ಆಗಷ್ಟೇ ಸೇರಿದ ಆಫೀಸಿನಲ್ಲಿ ಜೊತೆಗೆ ಸೇರಿದ ತರಲೆ ಹುಡುಗರಿದ್ದರು..ಚೂರೇ ಚೂರು ಮೇಕ್ ಅಪ್ ಮಾಡಿಕೊಂಡು ಹೋದರು, ‘ಲೇ ನಿನ್ನಜ್ಜಿ ಏನೇ ಮೇಕ್ಅಪ್ ಮಾಡಿಕೊಂಡು ಬಂದುಬಿಟ್ಟಿದ್ಯ…ಮಗ ನೋಡೋ ..’
ಅಂತ ರೇಗಿಸಿಬಿಡುತ್ತಿದ್ದರು.
ತ್ತೂ …. ನನ್ಮಕ್ಕಳ ಮಾನಕಳೆದುಬಿಡ್ತೀರ , ಗಂಡಸರ ನೀವು ಅಂತ ಕೆನ್ನೆ ಉಬ್ಬಿಸಿಕೊಂಡು ಕೂತ್ಕೊತಿದ್ವಿ.
ನಿಜ ಯಾವ ಹುಡುಗನ ಎದುರು ಕಂಗಳನ್ನ ತೆರೆದು ಓದಿಕೋ ಎನ್ನಲಿಲ್ಲ …
ಮಾತಾಡಲೂ ಇಲ್ಲ ..ಉಪಯೋಗಿಸಿಕೊಳ್ಳಲು ಇಲ್ಲ..
ಎಷ್ಟೇ ಬಿಸಿಲಿದ್ದಾಗಲೂ ಕೂಲಿಂಗ್ ಗ್ಲಾಸ್ ಹಾಕದವರು , ಟ್ರಿಪ್ ಗೆ ಹೋದಾಗ ಮರೆಯದೆ ತೆಗೆದು ಕೊಂಡುಹೋಗ್ತೀವಿ …ಹಾಕಿಕೊಂಡು ಫೋಟೋ ಹೊಡೆಸಿಕೊಳ್ತೀವಿ, facebok ಗೆ ಹಾಕಿ ಚಮಕ್ ಕೊಡ್ತೀವಿ…
ನಮ್ಮ ಕಣ್ಣುಗಳ ಸುತ್ತದ ಕಪ್ಪು ವರ್ತುಲಗಳನ್ನೂ ಅದು ಮುಚ್ಚುತ್ತದೆ , ಗುಳಿ ಕಂಗಳಿಗೆ ತೇಪೆ ಹಾಕುತ್ತದೆ, ಸೊಗಸಾಗಿ ಕಾಣುವಂತೆ, ಎಲ್ಲ ಸರಿ ಇರುವಂತೆ ಮಾಡುತ್ತದೆ…ನಾವು ನಂಬಿಸಲು ಪ್ರಯತ್ನ ಪಡ್ತೀವಿ, ಸುಖವಾಗಿದ್ದೇವೆ ಅಂತ…ಬದುಕಿಗೂ ಅಂತದ್ದೇ ಗ್ಲಾಸ್ ಸಿಕ್ಕರೆ !!!
ಕಣ್ಣುಗಳು ಮಾತಡ್ತವೆ….ನಂಗೂ ಗೊತ್ತು
ನನ್ನದೇ ಒಂದು ಭಾವುಕ ಪ್ರಪಂಚ ..
ಅಲ್ಲಿ ನೀಲ ಮೇಘ ಶಾಮನಿದ್ದ .
ಕೊಳಲನೂದುತ್ತ ಅರೆಗಣ್ಣಲ್ಲಿ ತನ್ಮಯನಾದವನ ಆಲಿಂಗಿಸಿಕೊಂಡು ಉನ್ಮತ್ತಳಾದವಳ ಕಣ್ಣುಗಳು … ಎರಡು ಜೋಡಿ ಕಣ್ಣುಗಳು …
ನನ್ನ ಕಣ್ಣಿನ ಕವಿತೆಯ
ಓದೋ ಓ ಹುಡುಗ
ಎನ್ನುತ್ತಾ ಎದುರು ನಿಲ್ಲಬೇಕು!!
ಭರತನಾಟ್ಯ ಆಡುವವರ ಕಣ್ಣುಗಳನ್ನು ಗಮನಿಸಿದ್ದೆ ಆ ಕಡೆ ಇಂದ ಈ ಕಡೆಗೆ ಪಟಪಟ ಓಡಿ , ಗಿರಗಿರ ತಿರುಗಿ , ನಕ್ಕು , ಮತ್ತೊಮ್ಮೆ ಆಕ್ರೋಶಗೊಂಡು ನವರಸಗಳನ್ನೂ ತೋರಿಸಿಬಿಡುವ ಕಣ್ಣು…ನನ್ನ ಅಕ್ಕ ಭರತನಾಟ್ಯ ಡ್ಯಾನ್ಸರ್ .ನನಗೆ ಬರುತ್ತಿರಲಿಲ್ಲ .
ನನ್ನದು ಕವಿರಸಸಮಯ
ಒಂದು ಅದ್ಭುತ ಪೋಲಿ ಕನಸಿತ್ತು
ನಾನು ಮತ್ತ ಅವನು , ಒಂದು ನದಿ ದಂಡೆ …ಅಕಾಶದಲ್ಲಿ ಶುದ್ಧ ಹಾಲು ಬೆಳದಿಂಗಳು ..
ಅವನ ಮಡಿಲಲ್ಲಿ ನಾನು..
ಕಣ್ಣುಗಳಲ್ಲಿ ಇಳಿಯಬೇಕು, ಆಳ ನೋಡಬೇಕು, ತೇಲಬೇಕು, ಮುಳುಗಬೇಕು , ಏನು ಆಡದೆ, ಏನು ಮಾಡದೆ ಎಲ್ಲಾ ಮಾತಾಡಬೇಕು…ಇಡಿ ರಾತ್ರಿ …
ನಿನ್ನ ಕಂಗಳ ಕೊಳದಿ
ಬೆಳದಿಂಗಳಿಲಿದಂತೆ
ನನ್ನೆದೆಯ
ಕಡಲೇಕೆ
ಬೀಗುತಿಹುದು
ಪ್ರಶ್ನೆ ಕೇಳಬೇಕು….
ಹರೆಯ, ಕನಸು, ಕವನ ಉಕ್ಕಿ ಉಕ್ಕಿ ಹರಿಯಬೇಕು …ಬೋರ್ಗರೆಯಬೇಕು..
ಅದೇ ಅಮಲಿನಲ್ಲಿ ಬರೆದು ಕೊಂಡಿದ್ದೆ —
ಕಾಡಿಗೆ ಹಚ್ಚಿದ್ದರಿಂದ ಹೆಚ್ಚಾಗದ ಕಾಂತಿ
ನಿನ್ನ ನೆನಪುಗಳಿಂದ ಹಚ್ಚಹಸಿರಾಗಿದೆ
ಉನ್ಮಾದದ ಹುಚ್ಚು ಹುಣ್ಣಿಮೆ ಚಂದ್ರನ ಓಟದಿಂದಲ್ಲ
ಚಂದ್ರನ ಬೆಳಕು ಜ್ನಾಪಿಸಿದ ನಿನ್ನ ನೋಟದಿಂದ
ರಾತ್ರಿಯ ನಿದ್ದೆಯಲ್ಲಿ ಮತ್ತೇರುತ್ತಿದ್ದದ್ದು
ಹಾಸಿಗೆಯ ಮೆತ್ತನಿಂದಲ್ಲ
ಕನಸಿನಲ್ಲಿ ನೀನಿಟ್ಟ ಮುತ್ತಿನಿಂದ
ಜಗತ್ತು ಹೊಸದಾಗಿ ಗೋಚರಿಸುತ್ತಿರುವುದು
ಆಗುತ್ತಿರುವ ಕ್ಷಿಪ್ರ ಬದಲಾವಣೆಗಳಿಂದಲ್ಲ
ನನ್ನ ಕಂಗಳ್ಲಲ್ಲಿ ನೀ ತುಂಬಿರುವುದರಿಂದ
ಅಪ್ಪ ಬಿಡಲಿಲ್ಲ ಅಂದ್ರೆ ಏನು, ಅವನು ಈಗಿನ ಕಾಲದವನು ..ಹಾಗೆಲ್ಲ ತಡೆಯಲ್ಲ ..
ಸೇಲ್ಸ್ ಗರ್ಲ್ ಹಚ್ಚಿದ್ದ ಬ್ರಾಂಡ್ ನ ಹೆಸರನ್ನು ಕೇಳಿ ಕಾಡಿಗೆ ಖರೀದಿಸಿದ್ದೆ ..
ಅದೊಂದು ಸೀನು ಆ ದಿನ ಅವನ ಕಣ್ಣುಗಳಿಗೆ ಭೀಕರ ಕೆಂಪಿನ ಅಮಲು , ಅವಳ ತುಟಿ, ಕೆನ್ನೆಗಳೆಲ್ಲ ಅದರುತ್ತಿರುತ್ತವೆ…
ಕಲ್ಪನೆಗೆ ನಾನು ಬೆವರಿದ್ದೆ .ಆ ದಿನ ಬಂತು .
ನನ್ನ ಕಣ್ಣಲ್ಲಿ ಕಣ್ಣನೆಡಲೇ ಇಲ್ಲ ಅವನು , ಹಾಸಿಗೆಯಲ್ಲಿತ್ತು ಅವನ ಕಣ್ಣು.. ಕೆಂಪನ್ನೇ ಹುಡುಕುತ್ತಿತ್ತು …ಕಂಡಮೇಲೆ ತೃಪ್ತಿಯ ಪಸೆ, ಕ್ರೌರ್ಯದ ಪಸೆ …
ಹರಿದು ಹೋಗಿದ್ದೆ ಒಳಗೆ !!
ನಿನಗೇನು ಇಷ್ಟವಾಯಿತು ಕೇಳುತಿದ್ದ, ಮಾತು ಬೇಕಿತ್ತು, ನಿನ್ನ ಕಣ್ಣಲ್ಲಿ ನಾನೆಂದೆ…ಅವನಿಗೆ ಅರ್ಥವೇ ಆಗಲಿಲ್ಲ ….
ಅಪ್ಪ ಕಾಡಿಗೆ ಹಚ್ಚಲು ಬಿಡದೆ ಇದ್ದಿದ್ದು ಒಳ್ಳೆಯದೇ ಇತ್ತು …ಅವನಿಂದ ಪದೇಪದೇ ಅತ್ತು ಅತ್ತು,ಕಾಡಿಗೆ ಕರಗಿ ಸುರಿದು , ಅಂದ ಕೆಡಿಸಿಕೊಳ್ಳೋದು ತಪ್ಪಿತ್ತು .
ಇಡಿ ರಾತ್ರಿ ರಚ್ಚೆ ಮಳೆಯಂತೆ ಬೋರಲಾಗಿ ಅತ್ತುಅತ್ತು ಹುಚ್ಚು ಹಿಡಿತಿದ್ರು ಹೆಣದಂತೆ ಮಲಗಿರುತ್ತಿದ್ದ …ನನ್ನ ಕಣ್ಣೀರು ಅವನನ್ನು ಅಲ್ಲಾಡಿಸುತ್ತಿರಲಿಲ್ಲ…
ನೆನಪಾಯಿತು ….ಅಂದು ಆ ದಿನ ನನ್ನ ಕಂಗಳ ಆಳವಾಗಿ ಓದಿದ ಗಂಡಸು ಸತ್ತು ಹೆಣವಾಗಿ ಮಲಗಿದ್ದ .ರಾತ್ರಿ ಎಲ್ಲ ಮಾತಾಡಿ, ಬೆಳಗ್ಗೆ ಎದ್ದು ಕೆಲಸಕ್ಕೆ ಹೋದವರನ್ನು, ಹೆಣವಾಗಿ ತಂದು ಮಲಗಿಸಿ ಕೊಂಡಿದ್ದೆವು .
ಇನ್ನಷ್ಟು ಗಂಟೆಗೆ ಮಣ್ಣು ಸೇರಿ, ಹುಳು ಹತ್ತುವ ದೇಹವನ್ನು ಕಡೆ ಬಾರಿಗೆ ಕಣ್ಣುತುಂಬಿಕೊಳ್ಳಬೇಕಿತ್ತು .
ರೆಪ್ಪ್ಪೆ ತೆರೆದು ನೋಡಿದೆ..ನನ್ನಂತವೆ, ಕೆಂಚು ಕಣ್ಣುಗಳು !!!
ನಿನಗೂ, ನನಗೂ, ಈ ಪ್ರಪಂಚಕ್ಕೂ ಎಲ್ಲ ಋಣವೂ ಹರಿದುಹೋಯಿತು ಎನ್ನುವಂತೆ ನಿರ್ಭಾವುಕವಾಗಿ ಆಕಾಶಕ್ಕೆ ನೆಟ್ಟ ಕಣ್ಣುಗಳು ….ನನ್ನ ಕಣ್ಣುಗಳ ಬಿಸುಪಿಗೆ, ಬಿಸಿಗೆ ಹೆದರಿಕೊಂಡ ಕಣ್ಣುಗಳು , ಇನ್ಯಾವುದಕ್ಕೂ ಹೆದರಲ್ಲ ಅನ್ನುತ್ತಿದ್ದವು .
ಹಣೆಗೊಂದು ಮುತ್ತು ಕೊಟ್ಟೆ , ತಣ್ಣಗಿತ್ತು….
ತುಟಿ ಬೆಳ್ಳಗಿತ್ತು .
ಸೋಲಬಾರದು ಎಂದು ಒಂದು ಗಂಟೆ ಹೋರಾಟ ಮಾಡಿದ್ದೆ ..ಕಡೆಗೆ ಸೋತು ಮಡಿದೆ…ಪೋಲೀಸರ ಎದುರು ಕಣ್ಣೀರು ತಡೆಯಲಾರದೆ ಉದುರಿ ಬಿದ್ದವು .ಎಷ್ಟೇ ಪ್ರಯತ್ನ ಪಟ್ಟರು ಮೀರಲಾರದ ಹೆಣ್ತನ .
ಆದರೆ ಹೆದರಲು ಅವರೇನು ಅಪ್ಪ ಅಲ್ಲವಲ್ಲ…
ಒಂದಿಡೀ ವರ್ಷ ಕಣ್ಣುಗಳನ್ನು ಶೂನ್ಯದಲ್ಲಿ ನೆಟ್ಟುಕೂತೆ …ಹಾದಿಬದಿಯಲ್ಲಿ ಮರ, ಹೂವು, ಬೆಟ್ಟಗಳಿದ್ದವು….ಎಲ್ಲ ಕಾಣುತಿತ್ತು ಆದರೆ ದೃಷ್ಟಿ ನೆಡುತ್ತಿರಲಿಲ್ಲ…
ಅವನನ್ನು ಮೀರಿ ನನ್ನ ಪ್ರೀತಿಸಿಕೊಳ್ಳಬೇಕೆಂದೇ ಮಾಡುತ್ತಿದ್ದ ವ್ಯರ್ಥ ಪ್ರಯತ್ನದಲ್ಲಿ ಒಮ್ಮೆ ನೀಲಿ eyeliner ಖರೀದಿಸಿದೆ ….ಹಚ್ಚಿಕೊಂಡ ದಿನವೇ ಅಕ್ಕ ಎಚ್ಚರಿಸಿದಳು… ಹೀಗೆಲ್ಲ ನೀನು vibrant ಬಣ್ಣ ಹಚ್ಚಬಾರದು …ಅಕ್ಕ ಪಕ್ಕದವರಿಗೆ ತಪ್ಪು ಕಾಣುತ್ತದೆ …
ಮತ್ತೆ ಸತ್ತೆ … ನಮ್ಮದೇ ಮನೆಯವರಿಗೂ ನಾವು ಇಷ್ಟು ಅಪರಿಚಿತರ ..??
ಅದು ಆಫೀಸ್ …
ನೀವು ಹೆಚ್ಚೇನೂ ಹೇಳುವುದು ಬೇಕೇ ಇಲ್ಲ, ನಿಮ್ಮ ಕಂಗಳೇ ಎಲ್ಲಾ ಹೇಳಿಬಿಟ್ಟವು ….
ಕಿವಿ ನೆಟ್ಟಗಾಯಿತು..
ನನಗೋಸ್ಕರ ಅಕ್ಕ ಆಕ್ರೋಶದಲ್ಲಿ ಬಡಬಡಿಸುತ್ತಿದ್ದಳು .
ಅರೆ ಈ ಹುಡುಗನಿಗೆ ಕಣ್ಣು ಓದೋಕೆ ಬರುತ್ತಾ..?
ಆದ್ರೆ ಅಕ್ಕನ ಕಣ್ಣನ್ನು ಏಕೆ ಓದಿದ..ಮಳ್ಳು ಮಳ್ಳು ನಗು!
ಇದು ಮೊದಲನೇ ಬಾರಿಯೂ ಅಲ್ಲ, ಕಡೆಯದೂ ಅಲ್ಲ… ಬೇಡ ಎನ್ನುವ ತಿರಸ್ಕಾರದ ಮಾತುಗಳು..ಹಣೆಬರಹದ ಜಾಡು ತಿಳಿದಿತ್ತು ಅವರಿಗೂ..
ಮೌನವಾಗಿದ್ದೆ…
ಹೆಣದೆದುರು ಕೂತವರಿಗೆ ಅತ್ತು ಬಿಡು ಎನ್ನುವಂತೆ ಅವರು ಸಮಾಧಾನ ಹೇಳುತ್ತಿದ್ದರು ..
ಏನಾದರು ಮಾತಾಡಮ್ಮ , ಧೈರ್ಯ ತೆಗೆದುಕೊಳ್ಳಮ್ಮ …..
ಹುಚ್ಚುಹುಚ್ಚಂಗೆ ಬೆಪ್ಪುಬೆಪ್ಪಂಗೆ ನಕ್ಕುಬಿಟ್ಟೆ ..
ಗಾಬರಿಯಾದಳು ಅಕ್ಕ
ಎಲ್ಲ ಕೊಚ್ಚಿಕೊಂಡು ಹೋದ ಮೇಲೆ ಮೂಡುವ ನಿಟ್ಟುಸಿರ ಬೆಪ್ಪು ನಗುವಂತಿದೆ ..ಸಮಾಧಾನ ಮಾಡಿಕೊ ಎಂದಳು…
ತಿರುಗಿ ನೋಡಿದೆ..
ಭರತನಾಟ್ಯದ ಕಣ್ಣುಗಳು…
ಯಾಕೋ ಮತ್ತೆ ನಗು ಬಂತು