ನಾವೆಲ್ಲಾ ಎಂತಹ ಸಜ್ಜನರು,ಸಂಸಾರಸ್ತರು ,ಎಷ್ಟೆಲ್ಲಾ ಮಾಡಿದೆವು, ಹೇಗೆಲ್ಲ ನೋಡಿಕೊಂಡೆವು,ನನ್ನ ಒಬ್ಬನೇ ಮಗ,ನನ್ನ ಒಬ್ಬನೇ ತಮ್ಮ— ತಂದೆ ಇಲ್ಲದ ಹುಡುಗ ಕಾಪಾಡೋಕೆ ಅಂತ ಮಧ್ಯ ಬರುತ್ತೇವೆ ಎಂದು ಕಣ್ಣೀರು ಸುರಿಸುತ್ತಾ, ಮಾತುಮಾತಿಗೂ ಅವನು ಗಂಡಸು ,ಅವನು ಗಂಡಸು ಎನ್ನುತ್ತಾ ಅವನ ಗಂಡಸುತನವನ್ನು ಮಾತಿನಲ್ಲೇ ನೆನಪಿಸಿ ನೆನಪಿಸಿ ಗಂಡಸಾಗಿಸಿ,ಅಮ್ಮ ಮಗಳು ಪ್ರತಿಷ್ಟಾಪಿಸುತ್ತಿರುತ್ತಿದ್ದರು .ಜೊತೆ ಜೊತೆಗೆ ಹೆಣ್ಣಾದವಳು ಹೀಗೆ ಮಾಡುವುದ, ಹಾಗೆ ಮಾಡುವುದ ಎನ್ನುವ ಹೆಣ್ತನ ಉಲ್ಲಂಘನೆ ಮಾಡಿದ ಆರೋಪಗಳು ಬೇರೆ ನನ್ನ ಮೇಲೆ .
ಕೂಗಿ ಕಿರುಚಾಡಿ ಬಿಡಬೇಕೆನಿಸುವಷ್ಟು ಕುದಿದು ಹೋಗುತ್ತಿತ್ತು, –‘ಅವನ ಹೆಂಡತಿ ನಾನು , ಅವನು ಗಂಡಸು ಹೌದೋ ಅಲ್ಲವೋ ಹೇಳಬೇಕಾದವಳು , ಹೇಳಲು ಸಾಧ್ಯವಿರುವವಳು ನಾನಷ್ಟೇ………’
‘ಇಲ್ಲ,ಇವಳ ಜೊತೆ ಸಂಸಾರ ಮಾಡಲು ನನ್ನಿಂದ ಆಗೋದಿಲ್ಲ, ಸತ್ತೆ ಹೋಗುತ್ತೀನೆ’ ಅಂತ ವೇಷ ಹಾಕಿ ಕುಣಿದಾಡುತ್ತಿದ್ದರೆ,ಕೇಳಿಬಿಡಬೇಕೆನಿಸುತ್ತಿತ್ತು ‘ಯಾವ ತೆವಲಿಗೆ ಅಂದು ತಾಳಿ ಕಟ್ಟಿದೆಯೋ?’, ಅಂತ ….
ಸುಮಾರು ವರ್ಷ ಆಗುತ್ತಲೇ ಬಂತು , ಕೈಗೆ ಸಿಗುತ್ತಿಲ್ಲ ಮಾರಾಯ ,ಕಡೆಪಕ್ಷ ಕಟ್ಟಿಕೊಂಡ ಹೆಂಡತಿಗೆ ಫೋನ್ ನಂಬರ್ ಕೂಡ ಕೊಟ್ಟಿಲ್ಲ .ಕಷ್ಟಪಟ್ಟು ಭೇಟಿಮಾಡಿದರೆ ಮತ್ತದೇ ಹುಲಿವೇಷ ….”ನಾನು ಗಂಡಸು ,ಹತ್ತು ಮನೆಯಲ್ಲಿ ಹೊಟ್ಟೆ ಹೊರೆದು ತಿನ್ನುತ್ತೇನೆ ,ನಾನು ಗಂಡಸು ಫುಟ್ಪಾತ್ ಮೇಲೆ ಮಲಗಿ ತೋರಿಸುತ್ತೇನೆ,ನಿನ್ನ ಹುಟ್ಟು ನೋಡು ,ನಿನ್ನ ಗತಿ ನೋಡು ….ನಮ್ಮಮ್ಮನೆ ನನ್ನ ಸಾಕಬೇಕು ಅಂತ ಏನು ಇಲ್ಲ ,ನಾನು ಗಂಡಸು ಸ್ವಾತಂತ್ರಿ! ನನ್ನನ್ನು ನಾನೇ ಸಾಕಿಕೊಳ್ಳುತ್ತೇನೆ …ನಾನು ಗಂಡಸು …”
ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ ನನಗೆ …ನನಗೆ ಗೊತ್ತು ಇವೆಲ್ಲ ಅವನ ಮಾತಗಳಲ್ಲ …ಅವನ ಅಮ್ಮ, ಅಕ್ಕ ನಾಲಿಗೆಯಲ್ಲಿ ಕೂತು ಆಡಿಸುತ್ತಿರುವಂತಹವುಗಳು …ಆಕ್ರೋಶ ,ಕೋಪ ,ಅಸಹ್ಯ ಎಲ್ಲ ಒಟ್ಟೊಟ್ಟಿಗೆ ನುಗ್ಗಿ ಬರುತ್ತದೆ ..ಆದರು ಅಸಹಾಯಕಳು ನಾನು..ನನಗೆ ಅವನು ಬೇಕು !
ಅವರುಗಳ ಪ್ರಕಾರ ಹೆಣ್ಣು ಗಂಡನಮನೆ ಬಿಟ್ಟು ತವರುಮನೆ ಸೇರಿದರೆ ,ಸಮಾಜದಲ್ಲಿ ಮಾನಹೋಗಿ ,ಜನ ಕಲ್ಲುತೆಗೆದುಕೊಂಡು ಹೊಡೆದು ಹೊಡೆದು ಸಾಯಿಸಿಬಿಡುತ್ತಾರೆ .ಅಥವ ಈ ಸಿನಿಮಾದಲ್ಲಿ ತೋರಿಸುವ ಹಾಗೆ, ನಡೆದು ಹೋಗುತ್ತಿದ್ದರೆ ಗುಂಪುಗಟ್ಟಿ ಅತ್ತಿತ್ತ ನಿಂತ ಜನರು , ಇವಳು ಹಂಗಂತೆ,ಕತೆ ಹಿಂಗಂತೆ,ಅವಳ ಅಮ್ಮ ಮಗಳನ್ನು ಬಾಳಿಸಲಿಲ್ಲವಂತೆ ಅಂತೆಲ್ಲ ಮಾತಾಡುತ್ತಾರೆ.ಹಾಗೆ ಹೇಳಿಹೇಳಿಯೇ ಹೆದರಿಸಿಬಿಟ್ಟಿದ್ದರು , ನಿಜವೇನೋ ಅನ್ನುವ ಹಾಗೆ ನಂಬಿದ್ದ ನನಗೆ , ಆಫೀಸಿನಲ್ಲಿಯೂ ತಲೆ ಎತ್ತಿ ನಡೆಯುಲಾಗುತ್ತಿರಲಿಲ್ಲ ,ಸತ್ತಂತೆ ಆಗಿಬಿಟ್ಟಿದ್ದೆ!!!
ಮತ್ತು ಆ ರೀತಿ ಆಗಬಾರದೆಂದರೆ, ಎಲ್ಲವನ್ನು ಸಹಿಸಿಕೊಂಡು ಸಂಸಾರ ಮಾಡಬೇಕಿತ್ತು.ಸಹಿಸಲಾಗದಿದ್ದ ದಿನ ಪೋಲಿಸ್ ವರೆಗೂ ಹೋದೆನಾದರಿಂದ, ಇಂದು ಅಂತ ಸನ್ನಿವೇಶವನ್ನು ಸೃಷ್ಟಿಮಾಡುವ ಸನ್ನಿಹಿತದಲ್ಲಿದ್ದಾರೆ.ನಿಜ ಬೆಂಗಳೂರಲ್ಲಿ ಬದುಕಲು ಬೇಕಿರುವುದು ದುಡ್ಡು ಒಂದೇ ,ಮಿಕ್ಕೆಲ್ಲ ಏನೇ ಆದರು –ಹೆಣ್ಣಾದರು,ಗಂಡಾದರು ,ಎರಡು ಆಗದೆ ಇದ್ದರು ಬದುಕಿಬಿಡಬಹುದು.ಅವನನ್ನು ಅವನ ದುರಹಂಕಾರವನ್ನು ದಿಕ್ಕರಿಸಿದ ನಾನು ಧೃತಿಗೆಟ್ಟಿದ್ದೆ.ಅಲ್ಲಿ ಇಲ್ಲಿ ಸುದ್ದಿಗಳು ತೂರಾಡಿ , ಹಾರಾಡಿ ,ಕತೆಗಳು ಸೃಷ್ಟಿಯಾಗಿ ,ಸರಿದಾಡಿ,ಡಿಕ್ಕಿ ಹೊಡೆದು ಮರಳಿ ನನ್ನನ್ನೇ ಅಪ್ಪಳಿಸುವವರೆಗೂ –‘ ಹುಡುಗಿಗೆ ಯಾರೊಂದಿಗೋ ಸಂಬಂಧವಿತ್ತಂತೆ,character ಸರಿ ಇರಲಿಲ್ಲವಂತೆ , ಓಡಿ ಹೋದಳಂತೆ ‘ ಕುಸಿದೇ ಬಿದ್ದೆ ….ಅವರ ಮಾತುಗಳಿಗೆ ಬೇರೆಯವರನ್ನು ಕೊಲ್ಲುವಷ್ಟು ಶಕ್ತಿ ಇತ್ತು…ಯಾವುದಕ್ಕೂ ಮಣಿಯದ ಹೆಣ್ಣು ಬೆದರುವುದು ಇಂತ ಅಪಾಧನೆಗಳಿಗೆ ಅಲ್ಲವೇ ….
ಗಂಡಿನ ಕಡೆಯವರಾಗಿ ಅಡ್ಡಿ ಆತಂಕ,ಅಡಚಣೆ ,ಅವಮಾನಗಳನ್ನೂ ಸೃಷ್ಟಿಮಾಡುತ್ತಲಿರುವುದು t.v ಧಾರಾವಾಹಿಗಳಲ್ಲಂತೆ ಬದುಕಿನಲ್ಲೂ ನೈಜ್ಯ ! ಮದುವೆ ಮಾಡುವುದು ಮತ್ತು ಮುರಿಯುವುದು as usual ಮನೆ ಹೆಂಗಸರ ಕೈನಲ್ಲೇ ಇರುತ್ತದೆ ,especially ನಾದಿನಿಯ ಕೈನಲ್ಲಿ .ನನ್ನ ಗಂಡನಂತ ಪುರುಷನಿಗೆ ತಲೆಗೆ ತುಂಬುವುದು ಅತಿ ಸುಲಭವಾದರಿಂದ ,’ಅವಳು ಹೆಣ್ಣೇ ಅಲ್ಲ ,ಸಂಸಾರಸ್ತೆಯ ಗುಣ ಕಿಂಚಿತ್ತು ಇಲ್ಲ ,ನಮಗೆಲ್ಲ ಗೌರವ ಕೊಡದೆ ಅವಹೇಳನ ಮಾಡಿದವಳನ್ನು ನೀನು ಕ್ಷಮಿಸಬಾರದು,ಸರಿಯಾಗಿ ಬುದ್ದಿಕಲಿಸಬೇಕು ,ಸುಮ್ಮನೆ ಬಿಡಬಾರದು, ಬಿಟ್ಟರೆ ನಿನ್ನನ್ನು ಕೈ ಗೊಂಬೆ ಮಾಡಿಕೊಂಡು ಮೂಲೆಯಲ್ಲಿ ಕೂಡಿಸಿ ಬಿಡುತ್ತಾಳೆ,ನಾವೆಲ್ಲಾ ಅವಳು ಹೇಳಿದಂಗೆ ಕೇಳಬೇಕಾಗುತ್ತದೆ ‘ ಏನೇನೋ ತಲೆ ತುಂಬಿಸಿಯಾಗಿತ್ತು ….
ಉಟ್ಟ ಬಟ್ಟೆಯಲ್ಲಿ ಮಧ್ಯರಾತ್ರಿ ಪೋಲಿಸ್ ಸ್ಟೇಷನ್ನಿಂದ ಅಮ್ಮನ ಮನೆಗೆ ಬಂದವಳು ನಾನು , ಆಫೀಸಿಗೆ ತೊಡಲು ಸಹ ಬಟ್ಟೆಗಳಿರಲಿಲ್ಲ…ಎರಡು ದಿನ ಬಿಟ್ಟು ಅವನ ಆಫೀಸ್ ಹತ್ತಿರಹೋಗಿ ಕೇಳಿಕೊಂಡಿದ್ದೆ ಮನೆಗೆ ಕರೆದುಕೊಂಡು ಹೋಗು ..ಅಂತಿಪ್ಪ ಗಂಡಸು ತನ್ನ ಹೆಂಡತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು,ಅವನ್ಯಾರೋ ದೊಣ್ಣೆನಾಯಕ ಚಿಕ್ಕಪ್ಪನ ಅಪ್ಪಣೆಯನ್ನು ಕೇಳಿದ್ದ …ಅವನೂ, ಮೆತ್ತಗೆ ವಿಷಸರ್ಪ ಬಿಟ್ಟಿದ್ದ . ‘ಅವಳಿಗೆ ಬೇಕಿರುವುದು ಗಂಡನಲ್ಲ, ಒಬ್ಬ ಗಂಡಸು ಮಾತ್ರ’ .ಮಖೇಡಿ ಗಂಡ ಹಿಂದಿನ ಬಾಗಿಲಿನಿಂದ ಕಾಣದಂತೆ ಜಾರಿಕೊಂಡು ನನ್ನ ಒಬ್ಬಳನ್ನೇ ಅಲ್ಲೇ ಬಿಟ್ಟು ಓಡಿಹೋಗಿದ್ದ.ಕಾದೂ ಕಾದೂ ಹಿಂದಿರುಗಿದ್ದೆ ನಾನು .
ಮೇಲ್ ಕಳಿಸಿದ್ದೆ ,ಮಾರಾಯ ಬಟ್ಟೆಗಳನ್ನಾದರು ದಯಪಾಲಿಸು … ಅದೆಲ್ಲಿ ಅಡಗಿ ಹಾಳಾಗಿ ಹೋಗಿದ್ದನೋ , ಎದುರಿಗೆ ಬರುತ್ತಿರಲಿಲ್ಲ,reply ಸಹ ಇಲ್ಲ . ಮನೆ ಹತ್ತಿರ ಹೋದರೆ ಅವನಮ್ಮನದು ಅದೇ ಹಾದಿರಂಪ ಬೀದಿ ರಂಪ , ಮನೆಯಲಿ ಮಗ ಇಲ್ಲ, ಎಲ್ಲಿದ್ದಾನೋ ಗೊತ್ತಿಲ್ಲ ,ಈ ಮನೆ ನನ್ನದು, ನಿಂಗೆ ಹಕ್ಕಿಲ್ಲ ….!!!
ಯಾಕೆ ಹೀಗೆಲ್ಲ ಸುದ್ದಿ ಎಬ್ಬಿಸಿದ್ದೀರಿ ಎಂದು ಜೋರು ಮಾಡಿ ಕೇಳಿದರೆ , ಎಷ್ಟು ಸುಲಭವಾಗಿ ,ಮಹಾನ್ ಸಾದ್ವಿಯಂತೆ ಹೇಳಿತ್ತಿದ್ದ ,ಯಾರು ಹೇಳಿದ್ದು,ಅವರನ್ನು ನನ್ನೆದುರಿಗೆ ಕರೆಸು, ಕಪಾಳಕ್ಕೆ ಹೊಡೆಯುತ್ತೀನಿ–ಆ ಕ್ಷಣಕ್ಕೆ ನಾನು ಮರುಳಾಗಿಬಿಡುತ್ತಿದ್ದೆ .ಮತ್ತೆ ಗುಂಪಿನಲ್ಲಿ ಸೇರಿಕೊಂಡಾಗ ಮಧ್ಯದಿಂದ ಅವನೇ “ಯಾವನ ಜೊತೆಗೋ ಯಾಕೆ ……” ಅಂತೆಲ್ಲ ಏನೇನೋ ಅಂದುಬಿಡುತ್ತಿದ್ದ .ನಮ್ಮ ಅಕ್ಕಂದಿರೇನಾದರು ಮುಜುಗರಕ್ಕೊಳಗಾಗಿ ‘ನೀವೇ ಹೀಗೆಲ್ಲ ಹೆಂಡತಿ ಮೇಲೆ ಹೇಳಿದರೆ ಹೇಗೆ’ ಎನ್ನಲು , ‘ನಿಮಗೆ ಅವಳ ಮೇಲೆ ನಂಬಿಕೆ ಇದೆಯಲ್ಲವ ?ನಾವೇನೇ ಹೇಳಿದರು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ’ ಎಂದು ದೂರ್ತ ಲಕ್ಷಣ ತೋರಿಬಿಡುತ್ತಿದ್ದ.
ಹೇಸಿಗೆ ಮೇಲೆ ಹೊರಳಾಡಿದಂತ ಅನುಭವ !!!!
ಅವನಮ್ಮ,ಮತ್ತು ಅವನಕ್ಕ ಸೇರಿಕೊಂಡು ನನ್ನಮೇಲೆ ಹೊಸ ಹೊಸ ಪದಪುಂಜಗಳನ್ನೇ ಸೃಷ್ಟಿಸಿದ್ದರು ,’ಲಿಂಕ್ ಇತ್ತಂತೆ,ಕನೆಕ್ಷನ್ ಇತ್ತಂತೆ ,ಅಫೇರ್ ಇತ್ತಂತೆ …..’
ಯಾರಾದರು ನಂಬಲು ಕೊಂಚ ತಡ ಮಾಡಿ ‘ಹುಡುಗಿ ಹಾಗೆ ಕಾಣಲ್ವಲ್ಲ , ಅವಳಪ್ಪ ಸತ್ತು ವರ್ಷವೇ ಆಗಿತ್ತು ಅಲ್ವಾ , ಹಂಗೇನಾದ್ರು ಇದ್ದಿದ್ದರೆ ಓಡಿಹೋಗಿ ಮದುವೆ ಆಗಿರಬಹುದಿತ್ತು ‘ ಅಂತ ಆಕ್ಷೇಪಣೆ ತೆಗೆದರೆ , ಸ್ವತಹ ಕಣ್ಣಾರೆ ಕಂಡು ,ಪ್ರಮಾಣಿಸಿದಂತೆ ‘ಇಲ್ಲಾಣ್ಣ…. ನಮ್ಮತ್ರ ಎಲ್ಲಾ ಪ್ರೂಫು ಇದೆ, ಲವ್ ಲೆಟರ್ಸ ಇದೆ, ಫೋಟೋ ಇದೆ, ನಾವೇ ನೋಡಿದ್ದೀವಿ ಗಾಡಿಲಿ ಕೂತು ಹೋಗೋದನ್ನ, ನಾಮಕಾವಸ್ತೆಗೆ ಇವನನ್ನು ಮದುವೆ ಆಗಿರೋದು ,protection ಗೆ ಒಬ್ಬ ಗಂಡಬೇಕು ಅಂತ , ನಮ್ಮ ಹಣೆಬರಹ ಮೋಸಹೋದೆವು ‘ ಎಂದು ನಂಬಿಸುತ್ತಿದ್ದರು ..
ಅದರಲ್ಲೂ ಹೆಂಗಸರ ಮಧ್ಯವೇ ಈ ರೀತಿ ಕತೆಗಳು ಹೆಚ್ಚು ಚಲಾವಣೆಗೊಂಡು ನಂಬಲ್ಪಡುತ್ತಿದ್ದದ್ದು.ಕತೆ ಎಲ್ಲಾ ಕೇಳಿ ಲೊಚಗುಟ್ಟಿ ,ಎಂತೆಂತ ಹುಡುಗೀರು ಇರ್ತಾರಪ್ಪ ,ಕಾಲಕೆಟ್ಟೋಯ್ತು,ನಿಮ್ಮ ಮನೇನೆ ಬೇಕಿತ್ತಾ ಹಾಳು ಮಾಡಲು ಅವಳಿಗೆ , ನೀವೆಂತಹ ಜನ ಎಂದು ಸಮಾಧಾನಪಡಿಸಿ, ಜೊತೆಗೊಂದಿಷ್ಟು ತಮ್ಮ ಪಾತಿವ್ರತ್ಯದ ಸ್ವಗುಣಗಾನ ಮಾಡಿಕೊಂಡು ಗಂಡ ಎಂದರೆ ತಮಗೆ ಎಂತ ನಿಷ್ಠೆ,ಭಯ ,ಭಕ್ತಿ ಎಂದೆಲ್ಲ ಕೆನ್ನೆಗೆ ಬಡಿದುಕೊಂಡು ,ಕಾಫಿ ಕುಡಿದು ಮುಂದಿನ ಮನೆಗೆ ಸುದ್ದಿ ದಾಟಿಸಲು ಎದ್ದು ಹೋಗುತ್ತಿದ್ದರು .
ಎಷ್ಟು ದಿನಾಂತ ಜನ ನನ್ನ ಬಗ್ಗೆಯೇ ಮಾತಾಡುತ್ತಾರೆ …ನಿಧಾನವಾಗಿ ಆದರು , ಕಡೆಪಕ್ಷ ಕೆಲವರಿಗಾದರೂ ಬೇರೆ ಮಾತು ಸಿಕ್ಕಿತು …
ಕೆಲ ಗಂಡಸರು ಒಳಗೊಳಗೇ ಮಾತನಾಡಲು ಶುರು ಮಾಡಿದರು ಕೊಂಚ ನನಗೆ ಕೇಳಿಸುವಂತೆ …’ಹುಡುಗಿ ಮೇಲೆ ಅನುಮಾನ ಅಂದರೆ, ಇನ್ಯಾರೊಂದಿಗೋ ಅಂದರೆ, ಇವನಿಗೇನಾದರು ಕಡಿಮೆ ಆಗಿತ್ತ …?ಕೈಲಾಗುತ್ತಿರಲಿಲ್ಲವ ?’
ನಂತರ ಜೋರಾಗೆ ಗೇಲಿ ಮಾಡಿಕೊಂಡು ನಗಲು ಶುರು ಮಾಡಿದರು ‘ಇವನಿಗೆ ಇಷ್ಟು ತಿಂಗಳುಗಳಾದರೂ ಹೆಂಡತಿ ಬೇಕು ಅನ್ನಿಸುವುದಿಲ್ಲವ , ಹುಡುಗಿ ಚೆನ್ನಾಗಿ ಇದ್ದಳು ಏನು ಕಡಿಮೆ ಆಗಿತ್ತು ,ಷಂಡ ಏನ್ರಿ ಇವನು ..ಅಮ್ಮನನ್ನು ಎದುರು ಹಾಕಿಕೊಳ್ಳಲಾಗದೆ ಹೆಂಡತಿಯನ್ನು ಬಿಟ್ಟಿದ್ದಾನೆ,ಸ್ವಂತ ನಿರ್ಧಾರಮಾಡಲು,ಸ್ವತಂತ್ರವಾಗಿ ಸಂಸಾರಮಾಡಲು ಅವನಿಗೆ ಸಾಧ್ಯ ಇಲ್ಲಾ ರೀ ..’
ಕುಡಿದು ಚಿತ್ತ್ ಆದವರು ಜೋರಾಗೆ ಅಂದರು,’ ಅವನು ಅದೇ.. ಹೆಣ್ಣೇ ಬೇಡಾ ಹಂಗೆ ಬದುಕ್ತೀನಿ ಅಂದ್ರೆ ..ಇನ್ನೊಂದು ಮದುವೆ ಆದರು ಆಗಬೇಕಪ್ಪ …!’
ನನ್ನ ಗೋಳು ನೋಡಿದ ಹೆಂಗಸರು ಕೂಡ,’ ಇಲ್ಲ ಬಿಡಮ್ಮ, ಅಮ್ಮ ,ಅಕ್ಕನ್ನ ಬಿಟ್ಟುಕೊಡದ್ದಿದ್ದರೆ ಹೋಗಲಿ ,ಇವನಿಗೆ ಸ್ವಂತ ಬುದ್ದಿ ಬೇಡ್ವಾ ,ಇಷ್ಟು ದಿನ ಆದ ಮೇಲಾದರೂ ಹೆಂಡತಿ ಸಂಸಾರ ಬೇಕೂ ಅನ್ನಿಸಲ್ವ ? …’
ಇಲ್ಲ ಸಾಧ್ಯವಾಗುತ್ತಿರಲಿಲ್ಲ , ಅವನೊಬ್ಬನಿಗೆ ನಿಭಾಯಿಸಿಕೊಳ್ಳಲು ….ಅಮ್ಮ ,ಅಕ್ಕನನ್ನು ಬಿಟ್ಟು ಒಂದು ಸಣ್ಣ ನಿರ್ಧಾರವನ್ನು ಮಾಡಿ ,ಒಬ್ಬನ್ನೇ ಮುಂದುವರೆಯುವ ತಾಕತ್ತು ಇರದ ಪುಕ್ಕಲ ಅವನು …ಎಂತ ದುಷ್ಟಾಂತ ಅದಕ್ಕೆ, ‘ನಾನು ದೊಡ್ಡವರನ್ನು ಬಿಟ್ಟು ಏನೂ ಮಾಡಲ್ಲ ,ಅವರ ಮಾತನ್ನು ಮೀರಲ್ಲ ……!!!!!!’
ತಪ್ಪೆಲ್ಲ ನನ್ನದೆ ,ಯಾಮಾರಿದ್ದು ನಾನೇ .ಮದುವೆಗೆ ಮುಂಚೆ ಒಮ್ಮೆ ಕೇಳಿದ್ದೆ , ‘ಕಷ್ಟ ಬಂದರೆ ಹೇಗೆ ನೋಡಿ ಕೊಳ್ಳುತೀಯ?ಕೈ ಬಿಡೋದಿಲ್ಲ ತಾನೇ ?’
ಎಷ್ಟು ಚೆನ್ನಾಗಿ ಗಿಣಿಪಾಠ ಒಪ್ಪಿಸಿದ್ದ ‘ಏನೇ ಆದರು ನಮ್ಮಮ್ಮ ಇಬ್ಬರನ್ನು ಸಾಕುತ್ತಾರೆ , ಹಂಗೇನಾದರು ಹೆಚ್ಚು ಕಮ್ಮಿಯಾದರೆ ನಮ್ಮ ಅಮ್ಮ ಕೊಟ್ಟಿದ್ದರಲ್ಲೇ ನಿನಗೂ ಸಮಪಾಲು ಕೊಡುತ್ತೇನೆ … ‘
ಇನ್ನೊಮ್ಮೆ ಅಂದಿದ್ದ ,’ನಮ್ಮ ಫ್ಯಾಮಿಲಿಯಲ್ಲಿ female domination ,ಎಲ್ಲ ಹೆಂಗಸರ ಕೈನಲ್ಲೇ …’ ಒಳಗೊಳಗೇ ಖುಷಿ ಆಗಿದ್ದು ಸುಳ್ಳಲ್ಲ .
ಮತ್ತೂ ಸೇರಿಸಿದ್ದ ‘ನಾನೇನಾದರು ಕೋಪ ಮಾಡಿಕೊಂಡು ಕೂಗಾಡಿ,ಹೊಡೆದರೂ ನಮ್ಮ ಮನೆಯವರೆದುರು ಸುಮ್ಮನಿದ್ದು ಬಿಡು, ಒಳಗೆ ರೂಮನಲ್ಲಿ ಬೇಕಾದರೆ ಹಿಡಿದು ಕುಕ್ಕಿಬಿಡು ..’. ಆಗಲೇ ಅರಿವಾಗ ಬೇಕಿತ್ತು ನನಗೆ, ಇವನ ಮನಸ್ಥಿತಿ ಮತ್ತು ಮನೆಸ್ಥಿತಿ … ಎಷ್ಟೆಲ್ಲಾ ಯಾಮಾರಿದ್ದೆ !!!!
ಅಲ್ಲೆಲ್ಲ ನಡೆಯುತ್ತಿದ್ದಿದ್ದು ಅಷ್ಟೇ..ಸುಳ್ಳೇ ನಟಿಸುವುದನ್ನು ಕರಗತ ಮಾಡಿಕೊಂಡಿದ್ದರು ಹೆಂಗಸರು, ಮತ್ತು ಅದನ್ನು ನಂಬುವುದನ್ನು ಅಭ್ಯಾಸ ಮಾಡಿಕೊಂಡಿದ್ದರು ಗಂಡಸರು .ಹೂಂಕರಿಸಿ ,ವೇಷತೊಟ್ಟು ಎರಡು ಹೆಜ್ಜೆ ಗಂಡಸರು ಇಡುತ್ತಿದ್ದಂತೆ,ಮೈಮೇಲೆ ಬಂದ ದೇವರಿಗೆ ಕೈಮುಗಿದು ‘ನನ್ನಪ ಕ್ಷಮಿಸಿ ಬಿಡಪ್ಪ ,ಏನೋ ತಪ್ಪಾಗಿದೆ ದೊರೆ ,ಹೊಟ್ಟೆಗಾಕೋ,ನಿನ್ನ ಬಿಟ್ಟರೆ ನಮಗೆ ಸದ್ಗತಿ ಉಂಟೆ ?’ಎಂದು ಶಿರಸಾ ಬಗ್ಗಿಸಿ ತಲೆ ತಗ್ಗಿಸಿ ನಿಂತುಬಿಡುವಂತೆ ನಿಂತುಬಿಡುತ್ತಿದ್ದರು.ಗಂಡಸುತನಕ್ಕೆ ಎಷ್ಟು ಮರ್ಯಾದೆ ಸಲ್ಲುತ್ತಿತ್ತು ಎಂದರೆ ಕೊನೆಗೆ ಪುಲ್ಲಿಂಗ ಹೊತ್ತುಹುಟ್ಟಿದ ಚಿಕ್ಕ ಮೊಗುವಿನ ಮಾತಿಗೂ ಆಸಾಧ್ಯ ಮನ್ನಣೆ , ಈಡೇರಿಕೆ ದಕ್ಕಿಬಿಡುತ್ತಿತ್ತು .ಹೀಗೆ ಬದುಕುವುದೇ ಹೆಣ್ತನದ ಸಾಕಾರ,ಸಾಕ್ಷಾತ್ಕಾರ ,ಗುಣ,ಲಕ್ಷಣ ,ಚಹರೆ ಎಂದು ಹೊಸ ವಾಕ್ಯೆಯನ್ನೇ ಬರೆದ್ದಿದ್ದರು ಹೆಣ್ಮಕ್ಕಳು !!!
ಅದು ಅಷ್ಟು ಸುಲಭವಾದದ್ದು,ನೈಜ್ಯವಾದದ್ದು ಆಗಿರಲಿಲ್ಲ ,ಮರ್ಮ ಇದ್ದದ್ದೇ ಅಲ್ಲಿ !!
ಇಡೀ ಸುತ್ತಲಿನ ಭೂಮಿಯನ್ನು ತಮ್ಮ ಅಳು,ನಗು ,ನುಲಿತ ,ಒಯ್ಯಾರ ,ವನಪು ಮಾತು,ಅಸಹಾಯಕತೆ ಮತ್ತು ಯಾವುದೂ ನೆರವೇರದ್ದಿದ್ದರೆ ಒಡಕು ಗಯ್ಯಾಳಿ ಬಾಯಿಗಳಿಂದ ಬಗ್ಗಿಸಿ,ಬಡಿದು,ಜಯಿಸಿ ದುಡ್ಡು ಬಾಚುತ್ತಿದ್ದ ಆ ಪ್ರಳಯಾನ್ಕಿತ ಹೆಂಗಸರಿಗೆ ಊರು ತಿರುಗಲು ,ವ್ಯವಹಾರ ಕುದುರಿಸಲು ,ಬಾಡಿಗೆ,ಬಡ್ಡಿ,ಚೀಟಿ,ಒಡವೆ,ಸೀರೆ ಇನ್ನು ಹಲವು ವ್ಯವಹಾರಕ್ಕೆ ಕೈ ತುಂಬಾ ಕಾಸು, ತಲೆತುಂಬ ಶ್ರೀಮಂತಿಕೆ,ಮತ್ತು ಸ್ವಾತ್ಯಂತ್ರ ಸಿಗಬೇಕಾದರೆ ,ಹೀಗೆ ಮನೆ ಗಂಡಸರೆದುರಿಗೆ ತಗ್ಗಿ ಬಗ್ಗಿ , ಇವರ ಚಾಕಚಕ್ಯತೆಗಳೆದುರು, ಗಂಡಸರ ಕೈಕೆಳಗಾಗದಂತೆ ,ಅವರ ಗಂಡಸುತನ ಮುಕ್ಕಾಗದಂತೆ ಕಾಪಡಬೇಕಿತ್ತು ಅಷ್ಟೇ . ಸಮಾಜದ ಎದುರು ಗಂಡಿನ ಹತೋಟಿಗೆ ಒಳಪಟ್ಟು ಬಾಳುತ್ತಿರುವ ಸತಿ ಶಿರೋಮನಿಯ ಐಡೆಂಟಿಟಿ ಕಾರ್ಡ್ ಬೇಕಿತ್ತು .ಎಲ್ಲಕಿಂತ ಹೆಚ್ಚಿಗೆ ಆ ಸೋಗಲಾಡಿ ಗಂಡಸರಿಗೆ ಶೋಕಿ ಮಾಡಲು ಕಪ್ಪಕಾಣಿಕೆ ಸಲ್ಲಬೇಕಿತ್ತು…ಯಾರ್ಯಾರ ಪಾಲು ಎಷ್ಟೆಷ್ಟೋ !!!
ಇಡೀ ಊರೆ ಹೆದರಿ, ನಡುಗಿ ,ಚದುರಿ ಮಣಿಯಲ್ಪಡುವಷ್ಟು ರುಡಾಲಿ ಶಕ್ತಿ ಇದ್ದ ಆ ಶಕ್ತಿದೇವತೆಗಳು,ತಮ್ಮ ಮನೆ ಗಂಡಸರ ಮುಂದೆ ಮಾತ್ರ ಕೈಮೇಲಿನ ಹುಳುವಿನಂತೆ ಆಡಿ ಬಿಡುತ್ತಿದ್ದರು.ಅಷ್ಟಲ್ಲದೇ ಏನಾದರು ತಂಟೆ ತಕರಾರು ಮಾಡಿಕೊಂಡು ಸಿಕ್ಕಿಹಾಕಿಕೊಳ್ಳುವ ಸಂಕಷ್ಟ ಮಾಡಿಕೊಂಡ ಗಂಡಸರನ್ನು ,ಹೇಗಾದರೂ ಮಾಡಿ ತಮ್ಮ ‘ಹೆಣ್ತನ’ಗಳ ಎಲ್ಲಾ ಶಕ್ತಿಯನ್ನು ಉಪಯೋಗಿಸಿ ಪಾರು ಮಾಡಿಬಿಡುತ್ತಿದ್ದರು ..ಹಾಗೆ ಗಂಡಸರು ಕೂಡ, ತಮ್ಮ ‘ಗಂಡು’ ಸಹಜ ಭಯ,ಗುಲ್ಲೆಬ್ಬಿಸಿ ಇವರುಗಳ ವ್ಯವಹಾರ ಸರಾಗವಾಗಿ ನಡೆಯುವಂತೆ ಸಹಕರಿಸುತ್ತಿದ್ದರು .. ಗಮ್ಮತ್ತು ಇದ್ದದ್ದೇ ಅಲ್ಲಿ , ಸುಲಭ ಶೋಕಿ ಬಯಸಿದ ಗಂಡಸರು,ಮತ್ತು ವ್ಯವಹಾರಪ್ರಿಯ ಚತುರ ಹೆಂಗಸರು,ಈ ಕಪ್ಪುಕಾಣಿಕೆಯ ನಿಮ್ಮಿತ್ತ ಸಂಧಾನ ಮಾಡಿಕೊಂಡಂತೆ,ಒಳಗೊಳಗೇ ಒಬ್ಬರಿಗೊಬ್ಬರು ಒತ್ತಾಸೆ, ಬಲ,ಬೆನ್ನೆಲುಬು,ಶಕ್ತಿಯಾಗಿ ಬೆಂಬಲಕ್ಕಿದ್ದರು …
ನಾನೋ ಶುದ್ದ ದಡ್ಡಿ .ಈ ರೀತಿ ನೀತಿ ಒಂದು ಅರೆಯದ ಅಮಾಯಕಿ!! ಒಂದೇ ಮನೆಯಲ್ಲಿ ಮುಖವಾಡ ತೊಡದೆಯೇ ಸಹಜವಾಗಿ ,ಸರಳವಾಗಿ ಪರಸ್ಪರ ಪ್ರೀತಿ ಗೌರವ ವಿಶ್ವಾಸಗಳಿಂದ ಬದುಕಬೇಕು ಎನ್ನುವ ಪರಂಪರೆಯಿಂದ ಬಂದವಳು .ಮತ್ತು ಹೊಸದಾಗಿ ಮದುವೆಯಾದ ಪ್ರತಿ ಹೆಂಗಸಿಗು ಇರುವಂತೆ ,’ಆವಾ ನನ್ನನ್ನು ಮುದ್ದುಗರೆಯಬೇಕು ,ಮರುಗಿ ಮಿಡಿಯಬೇಕು ,ಕಾಪಾಡಿ ಪೊರೆಯಬೇಕು ‘ ಎನ್ನುವಂತಹ ಶುದ್ಧ ಕನಸುಗಳು .ಅವನಿಗೆ ಬೇಕಿದ್ದಿದ್ದು ಕೇವಲ ಕಪ್ಪುಕಾಣಿಕೆ ಮತ್ತು ತನ್ನ ಗಂಡಸುತನದ ಗೊಟರು ,ಗತ್ತು ಸಾಬೀತು ಪಡಿಸುವಿಕೆಗಳಷ್ಟೇ .
ನಮಗಿದ್ದ ಕಲ್ಪನೆಗಳೇ ಬೇರೆ — ‘ನಿಜವಾದ ಗಂಡಸಾದವನು ಹೆಣ್ಣನ್ನು ಪ್ರೀತಿ,ವಿಶ್ವಾಸ,ಸ್ನೇಹ,ಕಾಳಜಿಗಳಿಂದ ಒಲಿಸಿಕೊಳ್ಳುತ್ತಾನೆ.ಸಂತೋಷಪಡಿಸಿ ,ಸಂತ್ರುಪ್ತಿಗೊಳಿಸಿ ಮುಖದಲ್ಲಿಯೇ ಸಂತುಷ್ಟಿಭಾವ ಹೊಮ್ಮುವಂತೆ ಮಾಡುತ್ತಾನೆ ,ಜವಾಬ್ದಾರಿ ನಿಭಾಯಿಸಿ ಗೌರವಾಧಾರಗಳಿಗೆ ಪಾತ್ರನಾಗಿ ಹೆಣ್ಣೊಬ್ಬಳಿಗೆ ಆರಾಧನೆಯ ವಸ್ತುವಾಗುತ್ತಾನೆ ,ಅವಳ ಮಾನ,ಗೌರವ,ಪ್ರಾಣಗಳಿಗೆ ರಕ್ಷಯಾಗಿ,ಜೀವನಕ್ಕೆ ಆಸರೆಯಾಗುತ್ತಾನೆ …..’ ‘ಕೈಲಾಗದವನು ಮಾತ್ರ ಹೆಣ್ಣಿನ ಮೇಲೆ ಕೈ ಮಾಡುತ್ತಾನೆ ,ಜಭರುದಸ್ತು ಮಾಡುತ್ತಾನೆ …’
ಅದೆಲ್ಲ ಪುಸ್ತಕದ ಬದನೆಕಾಯಿ , ಇಲ್ಲಿನ ಪ್ರತೀತಿಯೇ ಉಲ್ಟಾ ಇತ್ತು ,’ ಹೆಂಡತಿ ಜೊತೆ ಸಿಹಿಸಿಹಿ ಮಾತಾಡುತ್ತ ಅನ್ಯೋನ್ಯವಾಗಿರುವುದೆಂದರೆ ಅವನು ಅಮ್ಮಾವ್ರ ಗಂಡ ,ಹೆಂಡತಿಯನ್ನು ಭಯಕ್ಕೆ ಒಳಪಡಿಸದೆ ಹತೋಟಿಯಲ್ಲಿ ಇಡದೆ ಇರುವವನು ಶಾಮಂಡಿ ,ಎಲ್ಲರೆದುರು ಹೆಂಡತಿಗೆ ಎರಡೇಟು ಹಾಕದವನು ಕೈಲಾಗದವನು ,ಅವಮಾನ ಮಾಡದೆ ಇರುವವನು ಹೆಣ್ಣಿಗ …..ಹೀಗೆ’
ಏನೆಲ್ಲಾ ವ್ಯತ್ಯಾಸಗಳಿರಲಿ, ಕಡೆಪಕ್ಷ ಹೆಂಡತಿಯ ಚಾರಿತ್ರ್ಯವಧೆ ಮಾಡುವ ಮಟ್ಟಕ್ಕೆ ಇಳಿಯಬಾರದಿತ್ತು …
ದಾಂಪತ್ಯದಲ್ಲಿ ಏನೇನೋ ಇದೆ ಎಂದು ಬಲವಾಗಿ ನಂಬಿದ್ದವಳು ನಾನು….ಬೆಚ್ಚನೆಯ ಸಂಸಾರದಲ್ಲಿ ನೆಚ್ಚುಗೆಯ secuirtyಯಲ್ಲಿ ,ಪ್ರೀತಿಯನ್ನಷ್ಟೇ ಹೊಟ್ಟೆ ತುಂಬಾ ಉಂಡುಂಡು ಬೆಳೆದವಳು …ಸಂಸಾರದಲ್ಲಿನ ರಾಜಕೀಯ ಎಂದು ಕಂಡಿರಲಿಲ್ಲ ..
ಆಫೀಸರ್ ಆಗಿದ್ದ ಇಂಜಿನಿಯರ್ ಬುದ್ಧಿವಂತ ಅಪ್ಪ, ಕೇವಲ s.s.l.c ಪಾಸಾದ ,ಹಳ್ಳಿಗಮಾರೆ ಮತ್ತು ಪೆದ್ದು ಅಮ್ಮನ ಜೊತೆ ಬೆಳ್ಳಂಬೆಳ್ಳಗೆ ಆಫೀಸಿಗೆ ರೆಡಿಯಾಗುತ್ತ ಹರಟುತ್ತಿದ್ದರೆ ,ಕಂಬಳಿಯೊಳಗಿಂದಲೇ ಮುಗುಳ್ನಗುತ್ತ ಸೋಜಿಗಪಡುತ್ತಿದ್ದೆ.ಸಂಜೆ ಇಬ್ಬರು ಕಾಫಿ ಹೀರುತ್ತಾ ಊರು,ರಾಜಕೀಯ,ಮಕ್ಕಳ ಭವಿಷ್ಯ ಅಂತೆಲ್ಲ ಹರಡಿಕೊಂಡು ಹಂಚಿಕೊಳ್ಳುತ್ತಿದ್ದಾರೆ ಅವರ ಸ್ನೇಹಕ್ಕೆ ಮರುಳಾಗಿದ್ದೆ .35 ವರ್ಷಗಳ ಸುಧೀರ್ಘ ಸಾಂಗತ್ಯದಲ್ಲೂ ಅಪ್ಪ ನೆಪಗಳಿಗೆ ಮುನಿಸಿಕೊಂಡಾಗ,ಅಮ್ಮ ಒಳಗೊಳಗೇ ಬಿಕ್ಕುತಿದ್ದಿದ್ದು ನೋಡಿ ಎಷ್ಟು ಗಾಢ ,ದಟ್ಟ,ಆಗಾಧ ಎನಿಸಿತ್ತು ಪ್ರೀತಿ …
ಇನ್ನು ಮೊದಲನೇ ಅಕ್ಕ ಭಾವ 20 -30 ನಿಮಿಷಕೊಮ್ಮೆ ಕರೆಯಾನಿಸಿಕೊಂಡು , ಕುಶಲ -ಕ್ಷೆಮಾಧಿಗಳನ್ನು exchange ಮಾಡುತ್ತಾ ,ಊಟ ಆಯ್ತಾ ,ನೆಗಡಿ ಕಮ್ಮಿ ಆಯ್ತಾ ಅಂತ ಅಪ್ಡೇಟ್ ಆಗ್ತಾ ,15 ವರ್ಷ ಆಗೆಹೊಗಿದ್ದರು ನೆನ್ನೆಮೊನ್ನೆಯ ಮಧುಮಕ್ಕಳಂತೆ ಪಾಪು,ಪುಟ್ಟು ಅಂತ ಹೆಸರು ಸ್ಟೋರ್ ಮಾಡಿಕೊಂಡು ,ಸಮಸ್ಯೆಗಳಿಗೆ ಇಬ್ಬರು ಕೂತು ಅತ್ತು,ಜನರೆದುರು ನಗು ನಗುತ್ತ ಸುಮ್ಮನಾಗಿಬಿಡುವುದು ,ಇಡಿ ಜಗತ್ತೇ ಬಹಿಷ್ಕರಿಸಿದರು ನನಗೆ ನೀನು ನಿನಗೆ ನಾನು ಎನ್ನುತ್ತಾ ಇದ್ದುಬಿಡುತ್ತೀವಿ ಎನ್ನುವಷ್ಟು ನಿರ್ಲಿಪ್ತತೆಯನ್ನು ಸಮಾಜದಲ್ಲಿ ಬೆಳೆಸಿಕೊಂಡಿರುವುದನ್ನು ನೋಡಿದರೆ ಹೊಟ್ಟೆಕಿಚ್ಚು ಮತ್ತು ಆನಂದ ಎರಡು ಒಟ್ಟಿಗೆ ಆಗುತ್ತಿತ್ತು….
ಇನ್ನು ಎರಡನೇ ಅಕ್ಕ ಭಾವ ಮೊದಮೊದಲು ಎಷ್ಟೆಲ್ಲಾ ಜಗಳ,ರಗಳೆ ಮಾಡಿಕೊಂಡರು, ಈಗೀಗ ಅವರು ಖುಷಿ ಆಗ್ತಾರೆ ಅಂತ birthday ಗೆ ಕೇಕ್ ಒಯ್ಯುವ ಅವಳು, ಶಾಪಿಂಗ್ ಹೋಗಿ ಬರುತ್ತಾ ಉಂಗುರ ತಂದು ಬಿಡುವ ಭಾವ!!!
ಮತ್ತು ಆಫೀಸಿನಿಂದ ತಡವಾದರೆ ಅಲ್ಲೇ ಪ.ಜಿ ಯಲ್ಲಿದ್ದು ಬಾ ಎನ್ನುವಾಗ, ಅವಳೆಷ್ಟನೆಯ ಬಾರಿಯೋ ವಾಚಾಮಗೊಚಾರವಾಗಿ ನಿನಗೆ ಜವಾಬ್ದಾರಿ ಇಲ್ಲ ಅಂತ ಬೈಯುತ್ತಲಿರುವಾಗಲು,ಸುಳ್ಳು ಸುಳ್ಳೇ ಕಣ್ಣು ಮಿಟುಕಿಸಿ ನಗುವಾಗ ,ಏನಾದರೊಂದು ನೆಪ ಮಾಡಿಕೊಂಡು ಅಮ್ಮನ ಮನೆಯಲ್ಲೇ ಉಳಿದು ಬಿಟ್ಟರು ರೇಗದೆ,ರೇಜಿಗೆ ಪಡದೆ ಸುಮ್ಮನಾಗುವಾಗ , ಕೆಲಸಕ್ಕೋಗುವ ಅವಳನ್ನು ಕಾಡಿಸದೆ ಅತ್ತೆ ಮನೆಯಲ್ಲಿ ಊಟ ಮಾಡಿಕೊಂಡು,ಅವಳಿಗೂ ಒಂದು ಬಾಕ್ಸ್ ಕಟ್ಟಿಸಿಕೊಂಡು, ಮೊಗು ಎತ್ತಿಕೊಂಡು ಹೋಗುವಾಗ ಸೋಜಿಗವಾಗುತ್ತದೆ .. ಅಡಿಗೆ,ಪೂಜೆ,ತಿಂಡಿ ,ಮನೆಕ್ಲೀನು ಎನ್ನುವ ಯಾವ ಸಿದ್ದ ಸೂತ್ರಗಳಿಗೂ ಒಳಪಡದೆ ಇವರ ಮದ್ಯೆ attachment,commitment ಯಾವುದು ಇಲ್ಲವ ಅಂತ ಅನುಮಾನ ಪಡುತ್ತಿರುವಾಗಲೇ , ‘ಏನೇ ಆದರು ನಿನ್ನ ಬಿಡಲ್ಲ ಕಣೆ!’ ಅಂತ ನಮ್ಮೆಲರೆದುರೆ ಭಾವ ಅಂದಾಗ ನಮಗೂ ನಾಚಿಕೆ ಆಗದೆ ಇರುವುದಿಲ್ಲ …
ಎಷ್ಟೆಲ್ಲಾ ವೈವಿದ್ಯ ಪ್ರೀತಿಯಲ್ಲಿ,ಸಂಸಾರದಲ್ಲಿ ….
ಇವನಂತೆ ಕೆಟ್ಟ ಕೋಪಿಷ್ಟನು ,ದೋರ್ವಾಸಮುನಿಯು ಆಗಿದ್ದ ಚಿಕ್ಕಪ್ಪನಿಗೆ ಹೆದರಿ ಊರೆಲ್ಲ ನಡುಗುತ್ತಿದ್ದರು , ಹೆಂಡತಿಯನ್ನು ನೋಯದಂಗೆ ನಡೆಸಿಕೊಂಡು , ಸಂಸಾರ ಕಟ್ಟಿಕೊಂಡು ,ಮನೆ ಕಟ್ಟಿ,ಊರಿಗೆ ಯಜಮಾನನಾಗಿ ಕಳೆಕಟ್ಟುವಂತೆ ಬದುಕುವುದು ಇನ್ನೊಂದು ವಿದ …
… ನಿಜ ಯಾವ ಗಂಡ ಹೆಂಡತಿಯು fairytale ನಂತೆ ಅಲ್ಲಿಂದಾಚೆಗೆ ಸಂತೋಷದಿಂದ ಬದುಕಿದರು ಎನ್ನುವಂತೆ ಬದುಕುವುದಿಲ್ಲ , ಎಡರು ತೊಡರುಗಳಿಲ್ಲದೆ ಬಾಳುವುದಿಲ್ಲ …ಎಲ್ಲ ಕಡೆ ಏಳು ಬೀಳು,ನೋವು ನಲಿವು,ಕಷ್ಟ ಸುಖ ಜಗಳ,ಮನಸ್ತಾಪ, ಮುನಿಸು,ರಗಳೆ ಎಲ್ಲ ಬಂದಿರುತ್ತದೆ ..ಆದರೆ ಅವರ್ಯಾರು ಇವನು ನಿಭಾಯಿಸಿದಂಗೆ ನಿಭಾಯಿಸಿರುವುದಿಲ್ಲ …
————————————————————————————————————————————————————————
ಕುಣಿದು ಕುಣಿದು ಆದ ಮದುವೆ ಇದಾಗಿತ್ತು, ಮನಸಾರೆ ಪ್ರೀತಿಸಿ ಒಪ್ಪಿದ್ದೆ, ಅವನ smartness ಇಷ್ಟವಾಗಿತ್ತು , ನೇರವಂತಿಕೆ ಅಂತ ನಂಬಿದ್ದೆ , ಪಟಪಟ ಮಾತು , ಇಷ್ಟು ಒಳ್ಳೆಯ ಮನಸಿದೆ ಅನ್ನಿಸುವಂತೆ ನೀಡಿದ್ದ ಭರವಸೆಗಳು , ಅದೆಷ್ಟು ಹೊಗಳಿ ಹಾಡಿ ಅಟ್ಟಕ್ಕೆ ಏರಿಸಿದ್ದ ….ಮದುವೆ ನಂತರ ಹಾಗೆ ಪಾತಳಕ್ಕು ನೂಕಿದ್ದ!
ಆದರೆ ದೇಹ,ಪ್ರಜ್ಞೆ,ಮನಸು,ಅಂತರಾತ್ಮ,ಸುಪ್ತ ಮನಸು ಎಲ್ಲಾ ಅವನ್ನನ್ನು ಗಂಡ ಅಂತ ಬಲವಾಗಿ ಒಪ್ಪಿಕೊಂಡುಬಿಟ್ಟಿತ್ತು , ಬದಲಾಯಿಸೋದು ಅಂದ್ರೆ ಅಷ್ಟು ಸುಲಭಾನ ಅವನು ಡೈವೋರ್ಸ್ ಕೇಳುವಹಾಗೆ …
ಕಾರಣ ಕೇಳಿದ ಜನಕ್ಕೆ ಎಷ್ಟು ಹೇಳೋಕಾಗುತ್ತೆ…
ಇವೆಲ್ಲ ನನ್ನ ತುಮುಲಗಳು..
ಕೆಲಜನ ಹೇಳುತ್ತಾರೆ ಸಮಾಜದ ಬಗ್ಗೆ ಚಿಂತೆ ಮಾಡಬೇಡ ,ಎನು ಮಾಡಿದರು ಮಾತಾಡೆಕೊಳ್ಳುತ್ತೆ ಅದು, ಬದಲಾವಣೆ ನಿನ್ನಿಂದಲೇ ಆಗಬೇಕು , ನಾನೇನಾದರು ಆಗಿದ್ದಿದ್ದರೆ….. ನಿನಗೆ ಆತ್ಮಾಭಿಮಾನ ಇಲ್ಲ ,ಛಲ ಇಲ್ಲ …ಇನ್ನು ಏನೇನೋ…
ಅವನು ತಿರಸ್ಕರಿಸುತ್ತಿರಬಹುದು ,ಬೇಡ ಅನ್ನುತ್ತಿರಬಹುದು, ಆದರೆ ನಾನು ಪ್ರೀತಿಮಾಡಿದ್ದು ಸುಳ್ಳ ?ಈಗಲೂ ಗಂಡ ಎನ್ನುವ ಭಾವ ಕಾಡುವದು ಸುಳ್ಳ?
ಅವನನ್ನು ಕೇಳಿದ್ದಾದರು ಏನು ನಾನು, ರಾಕ್ಷಸನ ತರಹ ಮನಸನ್ನು ದ್ವಂಸ ಮಾಡದೆ, ಮನುಷ್ಯನಂತೆ ಇರು ಅಷ್ಟೇ ….!
ಸಾಕಷ್ಟು ಅರ್ಥಮಾಡಿಕೊಳ್ಳಲು ,ಅನುಸರಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೆ ..ಅವನ ಬಾಲ್ಯ, ಅತಿ ಬೇಗ ಸಂಭವಿಸಿದ ತಂದೆಯ ಧಾರುಣ ಸಾವು ,ಅದರೊಂದಿಗೆ ಹುಟ್ಟಿಕೊಂಡ ಅಭದ್ರತೆ ,ಬಡತನ,ತಾಯಿಯ ಅಸಹಾಯಕತೆ ,ಹತ್ತಿರದ ನೆಂಟರ ನಯವಂಚನೆ ,ಸಂಬಂಧಿಕರ ಭೋಳೆತನ ,ಬದುಕುವ ಛಲ ಎಲ್ಲವು ಸೇರಿ ಅವನ್ನನ್ನು ತಯಾರಿಸಿವೆ ಕೊಂಚ ಭಿನ್ನವಾಗಿ ..ಅವನ್ನನ್ನು ನಿರಂತರ ಎಚ್ಚರದಿಂದಿರುವಂತೆ ,ವಂಚನೆಗಳ ಹುಡುಕುತ್ತ ಚಡಪಡಿಸುವಂತೆ ,ಮುಖವಾಡ ತೊಟ್ಟು ಕೋಪಿಸಿ,ಕಂಪಿಸಿ ,ಹೆದರಿಸಿ ದುಷ್ಟಶಕ್ತಿಗಳನ್ನು ದೂರ ಓಡಿಸಿ ಭದ್ರತೆ ಸ್ಥಾಪಿಸಿಕೊಳ್ಳುವಂತೆ ,ದರ್ಪ ಅಹಂಕಾರ,ಗತ್ತು ನೀಡುವ rough image ,ಅದರೊಂದಿಗೆ ಸುಲಭವಾಗಿ ಆಗುತ್ತ ಹೋಗುವ ಕೆಲಸಗಳು ,ದಕ್ಕುವ ಸುಲಭದ ಲಾಭಗಳು ಅವನ್ನನ್ನು ಪ್ರರೇಪಿಸಿವೆ……
ಸಾಕಷ್ಟು ಬಾರಿ ಅನ್ನಿಸುತ್ತಲು ಇತ್ತು , ಹೊಸ ಪಾತ್ರ ಮನೆಗೆ ಬಂದಾಗ ,ಹೇಗೋ ಏನೋ ಅನ್ನುವಂತ ಗಾಬರಿ, ಸಣ್ಣಸಣ್ಣದ್ದರಲ್ಲೂ judge ಮಾಡುತ್ತಾ ಅರ್ಥಮಾಡಿಕೊಳ್ಳಲು ಎತ್ನಿಸುವ ಮನೋಸಹಾಜ ಗುಣ ,ಅಮ್ಮನಂತೆ,ಅಕ್ಕನಂತೆ ಇರಬೇಕು ಎನ್ನುವ comparision ,ನಾನೇ ಮೇಲಾಗಬೇಕು ಎನ್ನೋ ಹಂಬಲ ಸೃಷ್ಟಿಸುವ ಸಂಘರ್ಷಗಳು ಇವೆಲ್ಲ ಸಹಜ , ಒಂದೆರಡು ವರ್ಷ ಸುಮ್ಮನಿದ್ದುಬಿಟ್ಟರೆ ಮೊನೋಭೂಮಿಕೆಯ ಅನುಭವಗಳಿಂದ ತಂತಾನೇ ನಂಬಿಕೆಹುಟ್ಟಿ, ಬಾಂಧವ್ಯ ಬೆಳೆದು,ಸಾಮರಸ್ಯ ಏರ್ಪಟ್ಟು,ಸಂಸಾರ ಕುದುರುತ್ತದೆ . ನನ್ನ ಮೇಲೆ ನನಗೆ ನಂಬಿಕೆ ಇತ್ತು , ಸಣ್ಣ ಬುದ್ಧಿ ,ಕ್ಲಿಷ್ಟತೆಗಳಿಲ್ಲದ ಸರಳ ಹುಡುಗಿ ನಾನು ….
ಅದರೇನಾಯಿತು…..?
ಮತ್ತೇನೇನೋ ಅನುಭವಗಳು ಆಗತೊಡಗಿದವು ,ನಾನಂದುಕೊಳ್ಳುವಷ್ಟು ನೇರವಾಗಿ,ಸರಳವಾಗಿರಲ್ಲಿಲ್ಲ ವಿಷಯಗಳು …ಮತ್ತೇನೋ ಷಡ್ಯಂತ್ರ ಇದ್ದ ಹಾಗಿತ್ತು …
ಅಷ್ಟು ಸುಲಭವ ಹೊಸ ಹೆಂಡತಿಯ ಮನಸನ್ನು ಘಾಸಿಗೊಳಿಸುವುದು …?
ಎಂತಹ ದರ್ಪ ಅದು … !! ಟೀ ಬಿಸಿಯಲ್ಲಾಗಲಿ, ಪ್ರಮಾಣದಲ್ಲಾಗಲಿ ಕೊಂಚ ಹದತಪ್ಪಿದರು ,ಅಡಿಗೆಯಲ್ಲಿ ಉಪ್ಪು ಖಾರ ಚೂರೇ ಏರುಪೇರಾದರೂ ,ಕ್ಷಮಿಸಲಾಗದ ಅಪರಾಧ ! ಅವನೆದ್ದು ಹಾಸಿಗೆಯಿಂದ ಇಳಿದ ಕೂಡಲೇ ಗಮನಿಸಿ ಓಡಿ ಬಂದು ಅವನು ಹೊದ್ದುಕೊಂಡಿದ್ದ ಮೇಲುಹೊದಿಕೆಯನ್ನು ಮಡಚಿಟ್ಟು ಶುಚಿ ಮಾಡಿಬಿಡಬೇಕು … mosquito coil ಆಫ್ ಮಾಡಿರದ್ದಿದ್ದರೆ ,ಕೂಗಿ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡು ಬೈದು,ಆಜ್ಞೆ ಮಾಡಿ ನನ್ನ ಕೈಯಿಂದಲೇ ಆಫ್ ಮಾಡಿಸುತ್ತಿದ್ದ, ನೆಲ್ಲಿಯಲ್ಲಿ ನೀರು ಪೋಲಾಗಿ 4 ಬಿಂದಿಗೆ ಹರಿದುಹೋಗುತ್ತಿದ್ದರು , ಅಡಿಗೆ ಮನೆಯಿಂದ ಹೆಂಡತಿಯೇ ಬಂದು ನಿಲ್ಲಿಸಬೇಕು , ನ್ಯೂಸ್ ಪೇಪರ್,tv ಇರುವುದು ಅವನಿಗೆ ಮಾತ್ರ, ಹೆಣ್ಣುಮಕ್ಕಳಿಗೆ ಸಲ್ಲದು…ಕೆಲಸಕ್ಕೆ ಹೋಗಬೇಕಂದರೆ ಕಸತೆಗೆದು,ಮನೆವರಿಸಿ ,ಅಡುಗೆ ಮಾಡಿ –‘ನನಗೆ ಓದ್ದಿದ್ದರು,ದುರಹಂಕಾರವಿಲ್ಲಾ’ ಅಂತ ಸಾಬೀತುಪಡಿಸಿ ಹೊರಾಡಬೇಕು,ಆಫೀಸಿನಿಂದ ನೆನ್ನೆಗಿಂತ 5 ನಿಮಿಷ ತಡವಾದರೆ ಅದರಲ್ಲಿನ ವಂಚನೆಯ ವಾಸನೆ ಹತ್ತುತ್ತಿತ್ತು ,ಸಾರು ಚೆಲ್ಲಿದ್ದು ತಪ್ಪು,ಆದರೆ ಅದರ ಮೇಲೆ ಓಡಿ ಹೋಗಿ ಬಟ್ಟೆ ತರದೇ ನಿಧಾನವಾಗಿ ತಂದು ವರೆಸಿದ್ದು ಅಹಂಕಾರ, …ಕಾರಣವೇ ಬೇಕಿರಲಿಲ್ಲ ..ಏನೇನೋ ಕಟ್ಟಪ್ಪಣೆಗಳು … ಇದ್ದಕ್ಕಿದ್ದಂತೆ ಸ್ಪೋಟನೆ, ಘರ್ಜನೆ — ಒಂದೇ ಮಾತಿನಲ್ಲಿ ಕೆಲಸಕ್ಕೆ ಬರದವಳನ್ನಾಗಿ ಹೀಯಾಳಿಸಿ,ತುಚ್ಚವಾಗಿ ವಗೆದುಬಿಡುತ್ತಿದ್ದ ..ಬರಬರುತ್ತ ಅದೆಂತ ಭಯ ಆವರಿಸತೊಡಗಿತು… ಒಂದು ದಿನ ಹಲ್ಲುಜ್ಜುವುದನ್ನು ತಪ್ಪಿಸಿದರು ಪರವಾಗಿಲ್ಲ , ಸುಸ್ತು ಸಂಕಟ ಅಂತ ಒಂದು ದಿನ ಅಡಿಗೆ ಮನೆಗೆ ಪ್ರವೇಶಿಸುವುದನ್ನು ತಪ್ಪಿಸುವುದು ಬೇಡ ಎನಿಸಿಬಿಟ್ಟಿತ್ತು …ಆದಿನ ಅದೇನೋ ಆಯಾಸ, ಕೂತಿದ್ದೆ ತೂಕಡಿಸುತ್ತಾ ,..ಅರಚಿದ್ದ –‘govt ಲಾಡ್ಜ್ ಆಗೋಯ್ತು ಮನೆ , ಬರಿ ತಿನ್ನುವುದು ,ಹಾಯಾಗಿ ಮಲಗುವುದು,ಇಷ್ಟೇ ‘. ಬಹುಷ್ಯ 14 ಗಂಟೆ ಹೊರಗೆ ದುಡಿದು ಬರುವ ಯಾವ ಹೊಸ ಹೆಂಡತಿಗೂ ಗಂಡ ಹೀಗೆ ಅಂದಿರಲಾರ …. ಎಷ್ಟೋ ಕೋಟಿಗೆ ಬದುಕುವವನು , ಯಾವುದೊ ಬಿಸಿನೆಸ್ tensionalli , ಕೂಲಿಗೆ ಕಾಲಲ್ಲಿ ಜಾಡಿಸುವಂತಿರುತ್ತಿತ್ತು…
ಗಂಡು ಹೆಣ್ಣು ಎನ್ನುವ ಒಂದು ಕಾರಣ ಸಾಕಿತ್ತು ಪ್ರೀತಿ ಹುಟ್ಟಲಿಕ್ಕೆ …ನವ ವರನಿಗೆ ಯಾಕೆ ಇಂತ ಕಲ್ಲೆದೆ …ಹೆಣ್ಣನ್ನು ಒಲಿಸಿಕೊಳ್ಳುವುದರ ಬದಲು ,ಅವಳ ಮನಸನ್ನು ಹೀಗೆ ಹಿಂದೆ ಮುಂದೆ ನೋಡದೆ ,ಮುರಿದು ಹಾಕುವಾಗ ,ಸಿಗುವ ಖುಷಿಯಾದರು ಎಂತದ್ದು .
ಪರವಾಗಿಲ್ಲ ಅವನಿಗೇನೋ ಆತಂಕ ,ನನ್ನನ್ನು ನಾನೇ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಪಡುತ್ತಿದ್ದೆ, software ಸೊಸೆ ,ತನ್ನ ಶ್ರಮಜೀವಿ ಅಮ್ಮನಿಗೆ ಮದದಲ್ಲಿ ಸೆಡ್ಡು ಹೊಡೆದು ಕಡೆಗಣಿಸುತ್ತಾಳೆ ಅಂತ ಅವನಿಗೆ ಭಯ, ಹೋಗುತ್ತಾ ಹೋಗುತ್ತಾ ಅರಿವಿಗೆ ಬರುತ್ತದೆ ನನ್ನ ತಲೆಯಲ್ಲಿ ಆ ತರದ ಅಹಂಕಾರಗಳು ಇಲ್ಲವೆಂದು ….
..ಕೆಲವರು ಹಾಗೆ , ನಡೆದು ಬಂದ್ದದ್ದು ,ಕಾರಣ ಸಿಗುವುದಿಲ್ಲ, ಒಪ್ಪಿಕೊಳ್ಳುವುದ,ಸಹಿಸಿಕೊಳ್ಳುವುದ ಬಿಟ್ಟು ಅನ್ಯತ ಮಾರ್ಗವಿಲ್ಲ ಮದುವೆಯಲ್ಲಿ ….
ನನ್ನ ಹತ್ತಿರ ಅವನ ಮನೆಗೆ ಪ್ರವೇಶಿಸುವಾಗ ಏನಿತ್ತು ? ಎಲ್ಲವನ್ನು ಅವನಿಗೆ ಸಂಪೂರ್ಣವಾಗಿ ಕೊಟ್ಟಿದ್ದೆ,ತುಂಬು ಪ್ರೀತಿ ,ತುಂಬು ಯವ್ವನ ,account ನಲ್ಲಿ ಇದ್ದ ಬದ್ದ ಹಣ ….ತವರು ಮನೆ ದುಡ್ಡು !
ಮತ್ತೇನು ಬೇಕಿತ್ತು ಅವನಿಗೆ ?ಹುಡುಕುತ್ತಲೇ ಇರುತ್ತಿದ್ದ ತನಗೆ ಯಾವುದೋ ಕಡಿಮೆಯಾಯಿತು,ಲೋಪವಾಯಿತು ,ಏನೋ ಮುಚ್ಚಟ್ಟೆ ಮಾಡುತ್ತಿದ್ದಾಳೆ ,ಸಂಪೂರ್ಣ ದಕ್ಕುತ್ತಿಲ್ಲ ಎನ್ನುವಂತೆ …….
ಮದುವೆಗೆ ಮುಂಚೆಯೇ ನನ್ನ ಕಾಲ್ ಹಿಸ್ಟರಿ ತೆಗೆಸಿದ್ದ , ಯಾರ ಜೊತೆಗಿನ ಸ್ನೇಹ,ಯಾಕೆ ದೀರ್ಘ ಮಾತು ವಿಚಾರಣೆ ಮಾಡಿದ್ದ…
ಅಲ್ಲೇ ಕಸಿವಿಸಿಯಾಗಿದ್ದ ನಾನು ದಿಟ್ಟವಾಗಿ ಹೇಳಿದ್ದೆ , ಸಮಸ್ಯೆ ಏನು?ಯಾಕೆ ತೆಗೆಸಿದ್ದು,ನೀನಾ?, ಹಾಗಾದರೆ ಮದುವೆ ಕ್ಯಾನ್ಸಲ್ !!!
–ನಾನಲ್ಲ, ನನ್ನ ಕಸಿನ್ಸ್ ,ಕೇಳಿದೆನಷ್ಟೆ.. ಅನ್ಯತ ಭಾವಿಸಬೇಡ ,ಯಾರಿಗೂ ತಿಳಿಸಬೇಡ ……
ಮೊದಲ ವಾರದಲ್ಲೇ ಇಮೇಲ್ ಪಾಸ್ ವರ್ಡ್, ಐ. ಡಿ ಕೊಡುವಂತೆ ಅಜ್ನಾಪಿಸಿದ್ದ …
ನಂಬಿಕೆ ಇಲ್ಲ ಅಂದರೆ ಮದುವೆ ಯಾಕೆ ಆದೆ, ನಾನ್ಯಾಕೆ ಕೊಡಬೇಕು ,ಕೇಳೋದಕ್ಕೆ ಒಂತರ ಅನ್ನಿಸಲ್ವ ? ದ್ವನಿ ಏರಿಸಿದ್ದೆ …
ಮಧ್ಯ ಅವರಮ್ಮ ಬಂದರು , ಅವನಕ್ಕನನ್ನು ಕರೆಸಿದರು — ಅಷ್ಟೇ ತಾನೇ ಕೊಟ್ಟು ಬಿಡು, ಏನು ಇಲ್ಲ ಅಂದ ಮೇಲೆ ಯಾಕೆ ಪ್ರತಿರೋಧ ಮಾಡುವೆ, ನೋಡಿ ಸುಮ್ಮನಾಗುತ್ತಾನೆ, ಹೀಗೆ ಒಲ್ಲೆ ಎಂದರೇನೆ ಅವನ ಅನುಮಾನ ಇನ್ನಷ್ಟು ಕೆರಳುವುದು , ಆಸಕ್ತಿ ಹೆಚ್ಚುವುದು — ಎಷ್ಟು ಚಂದ ಸಮಜಾಯಿಸಿ ನೀಡಿದ್ದರು! ಕೊಟ್ಟೆ , ನೋಡೋಣ ಅದೇನು ಹೆಕ್ಕಿ ತೋರಿಸುತ್ತಾನೋ ಎಂದು ….
ಹಾಗದಮೇಲೆ ನನ್ನ ಮೊಬೈಲ್ ಇನ್ಬಾಕ್ಸ್ ನೋಡಿ ,ಕೆಲಸಕ್ಕೆ ಬಾರದ ಮೆಸೇಜ್ ಗೆ ಅಪಾರ ಅರ್ಥಗಳನ್ನು ಕಲ್ಪಿಸಿ ಪೆಟ್ಟು ತಿಂದ ಮೃಗದಂತೆ ಭೂಮಿ ಆಕಾಶವನ್ನು ಒಂದು ಮಾಡಿ ಘೀಳಿಟ್ಟಿದ್ದು , accident ಅಲ್ಲ , ಸುಮ್ಮನೆ ನೋಡಿದ್ದಲ್ಲ !!!
ನನಗೊತ್ತು ನಾನಿಲ್ಲದ ಸಮಯದಲ್ಲೆಲ್ಲ ನನ್ನ ಫೋನ್ ಶೋಧನೆಗೊಳಪಡುತ್ತಿರುತ್ತದೆ … ಹಾಗೆ ನೋಡಿಯಾದರು ನಿಸೂರಗಲಿ ಎಂದು ಯಾವ ಪಿನ್ ಗಳನ್ನೂ ಸೆಟ್ ಮಾಡಲು ಹೋಗಲಿಲ್ಲ …
ಎಷ್ಟೇ ವಾಲ್ಯುಮ್ ಕೊಟ್ಟುಕೊಂಡು ಹೆಡ್ ಫೋನ್ ಸಿಕ್ಕಿಸಿಕೊಂಡು ಮೈ ಮರೆತ್ತಿದ್ದರು , ಗೆಳತಿಯದೋ , ತವರು ಮನೆಯವರದ್ದೋ ಫೋನ್ ಬಂದೊಡನೆ , ಸೌಂಡ್ ಮ್ಯೂಟ್ ಆಗಿರುತ್ತದೆ …ಏನು ಮಾತಾಡಿದೆ ಮನಸ್ಸು ಹೀರಿಕೊಳ್ಳುತ್ತಿರುತ್ತದೆ.. ನಾನೇನಾದರು ಕೊಂಚ ಅಸಮಾದಾನ, ಅಸಂತುಷ್ಟಿ ತೋರಗೊಟ್ಟೆನೋ ಮತ್ತೊಂದು ರಣರಂಗದ ವೇದಿಕೆ ಸಜ್ಜು ….. ನ್ಯಾಯ ಪಂಚಾಯ್ತಿ ನೆರವೇರುತ್ತದೆ ….
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ಹೊಲೆಯ ಐತ , ತನ್ನ ಹೆಂಡತಿಯ ಬಗ್ಗೆ ಅವನ ಸ್ನೇಹಿತ ತೆಗೆದ ಕೊಂಕು, ಅನುಮಾನಗಳನ್ನು ಪರಿಹರಿಸಿಕೊಳ್ಳಲು, ತನ್ನ ಪ್ರೀತಿಯ ಹೆಂಡತಿ ಯಜಮಾನನ್ನನ್ನು ಸಂಧಿಸುವುದನ್ನು , ದೈಹಿಕ ಸಂಭಂದಕ್ಕೆ ಆರೋಪಿಸಿಕೊಂಡು ,ಮರ ಏರಿ ಕದ್ದು ನೋಡುತ್ತಿರುತ್ತಾನೆ …
ಅನುಮಾನ ಬಗೆಹರಿದ ಮೇಲೆ ,ಏನೋ ಮಾತಾಡುತ್ತ ತಾನು ಮರ ಹತ್ತಿ ಕದ್ದು ನೋಡಿದ್ದನ್ನು ಹೆಂಡತಿ ಎದುರು ಬಿಟ್ಟುಕೊಟ್ಟು ಬಿಡುತ್ತಾನೆ … ಹೊಲೆಯಳಾದರೇನು,ಪೀಂಚಲುವಿಗೆ ಆತ್ಮಾಭಿಮಾನ, ಸ್ವಾಭಿಮಾನಗಳಿರುವುದಿಲ್ಲವ? ಹೊಂಚು ಹಾಕಿ ನೋಡುವ ಬುದ್ಧಿಬೇರೆ ಕಲಿತ್ತಿದ್ದೀಯ ಎಂದು ಹೌಹಾರುತ್ತಾಳೆ …..
ಹೊಂಚು ಹಾಕಿ ಹಾಕಿ ಎಷ್ಟೆಲ್ಲಾ evidence collect ಮಾಡಿಟ್ಟುಕೊಂಡಿದ್ದ …. ನನ್ನೆದುರಿಗಿಂತ , ನೆಂಟರ ಎದುರೆ ಅದು ಚಲಾವಣೆಯಾಗುತ್ತಿದ್ದಿದ್ದು ,ಸಾಕ್ಷಿ ನುಡಿಯುತ್ತಿದ್ದಿದ್ದು…!!!!
ಅವನಿಗೆ ಗೊತ್ತಿತ್ತು ನನ್ನೊಲೊಬ್ಬ ಬರಹಗಾರ್ತಿ ಇದ್ದಾಳೆಂದು … ಟ್ಯಾಲೆಂಟ್ ಎಂದು ಕೊಂಡು,ಮದುವೆಗೆ ಮುಂಚೆಯೇ ತಿಳಿಸಿದ್ದೆ, ಅದನ್ನು ತೋರಿಸಿಯೂ ಇದ್ದೆ , ಮದುವೆ ನಿಶ್ಚಯವಾದಾಗ , ನನಗೆ ಸಿಕ್ಕ ನಿಧಿ ಇವನು ಎಂದು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದು…..
ಅದೆಲ್ಲಿ ಅನ್ವೇಷಿಸಿದ್ದನೋ ,ಅವನ ಪ್ರಕಾರ ಎಲ್ಲ ತಾನಾಗೆ ಕೈಗೆ ಸಿಗುತ್ತಿತ್ತು… ಇದ್ದರು ಇರಬಹುದು , ಮುಚ್ಚಿಡುವಂತದ್ದು ನನಗೇನು ಇರಲಿಲ್ಲ …… ನನ್ನ ಕೇಳಿದರೆ ಸರಿ, ಆದರೆ ಗೊತ್ತಿತ್ತಲ್ಲ ಅವನಿಗೆ …ಅವನಮ್ಮ, ಅಕ್ಕ, ಮತ್ತು ಅವನು ಸೇರಿಕೊಂಡು ನನ್ನ ಬಳಗವನೆಲ್ಲ ಕರೆದು ಜೆರಾಕ್ಸ್ ಗಳನ್ನೂ ಮಾಡಿಸಿ , yellow ಮಾರ್ಕರ್ ನಲ್ಲಿ ತೋರಿಸಿ , ಸಮಜಾಯಿಸಿ ಕೇಳಿದ್ದರು ….
….
ಮದುವೆಗೆ ಮುಂಚೆ ನನ್ನ ಆಫೀಸ್ ಹತ್ತಿರ ವಿಚಾರಿಸಿದೆ , ಜನರ ಫೀಡ್ ಬಾಕ್ ತೆಗೆದುಕೊಂಡೆ ಎನ್ನುತ್ತಿದ್ದದ್ದು, ಬಿಲ್ಡಿಂಗ್ ಓನರ್ ಪರಿಚಯದ ಮೂಲಕ ಅಲ್ಲ ಬಹುಷ್ಯ private detectives ಕೈಚಳಕ ಅದು ….
ನಂಬಿಕೆ ಮೇಲೆ ಭೂಮಿ ನಡೆಯುತ್ತೆ… ಹುಟ್ಟಿದಾಗ ತಂದೆ ತಾಯಿ ಅಂತ ಯಾರು ಮುಂದೆ ಬರುತ್ತಾರೋ ಅದನ್ನೇ ನಂಬಿಕೊಂಡು ಬದುಕು ನಡೆಯುತ್ತೆ … ನಂಬಿಕೆ ಇಲ್ಲದೆ ತಾಳಿ ಕಟ್ಟುವುದೇಕೆ , ಪಕ್ಕ ಮಲಗುವುದೇಗೆ ?
ತುಂಬು ಪ್ರೀತಿ, ತುಂಬು ಕನಸುಹೊತ್ತು ಅರ್ಪಿಸಿಕೊಂಡಾಗ , ಮಗ್ಗುಲಿಂದ ಹೊರಳಿ ಇನ್ನೇನ್ನೋ ತಡಕುತ್ತಿದ್ದಾನೆ ಎನಿಸಿದರೆ ಆಗುವುದು ನಂಬಿಕೆ ದ್ರೋಹವೋ , ಜಿಗುಪ್ಸೆಯೋ …!!
ನನ್ನ ನಂಬಿಕೆಯ ಪ್ರಪಂಚ ಕುಸಿದ್ದಿದ್ದು , ಅವನು ಗಿಫ್ಟ್ ಅಂತ ಕೊಡಿಸಿದ್ದ ,ಸಿಮ್ ಕಾರ್ಡ್ಅನ್ನು , ಪ್ರತಿ ತಿಂಗಳು ರೂಮು ಬಾಗಿಲು ಹಾಕಿಕೊಂಡು ಒಂದು ಕಡೆಯಿಂದ ಯಾರ್ಯಾರ ನಂಬರ್ ,ಎಷ್ಟೆಷ್ಟು ಹೊತ್ತು , ಯಾಕೆ ಎಂದು ಬಿಲ್ ನೋಡಿ ಹುಡುಕುವುದಕ್ಕೆ …… !!! ಅನ್ನುವುದು ಖಾತ್ರಿಯಾದಾಗ .ಎಂತ ನಯವಂಚನೆ ….
ಎಂದಾದರು ನಾನು ಈ ರೀತಿಯೆಲ್ಲ ಅವನ ಬಗ್ಗೆ ಯೋಚಿಸಿದ್ದೆನ? ನಂಬಿಕೆ ಇಡದೆ ಕೊಟ್ಟುಕೊಳ್ಳುವಿಕೆ ಹೇಗೆ ಸಾಧ್ಯ,25 ವರ್ಷ ಅಪರಿಚಿತನಾಗಿದ್ದವನಿಗೆ … ತೆಗೆದುಕೊಳ್ಳುವವನೆ ಎಷ್ಟೆಲ್ಲಾ quality check ಮಾಡುತ್ತಾನೆ ಅಂದರೆ …!!!
ನಮ್ಮವರನ್ನು ಅನುಮಾನಿಸುವುದೆಂದರೆ ,ಅವಮಾನ ಮಾಡಿದಂತೆ ಆಗುತ್ತದೆಯಲ್ಲವ …? ಮುಲಾಜೆ ಇರಲಿಲ್ಲ ಅವನಿಗೆ …
ಜಿಗುಪ್ಸೆಗೊಳ್ಳುವುದು, ನೋವು ಪಟ್ಟುಕೊಳ್ಳುವುದು ಬಿಟ್ಟರೆ ಬೇರೇನೂ ಮಾರ್ಗವಿರಲಿಲ್ಲ ನನಗೆ!
ಗಂಡ ತಾನೇ… ಹೋಗಲಿ ಬಿಡು ಕೆಲ ಗಂಡಸರೇ ಹೀಗೆ , ಹೆಂಡತಿ ಮೇಲೆ ವಿಪರಿತ ಪ್ರೀತಿ , possessiveನೆಸ್ ಹೀಗೆಲ್ಲ ಆಡಿಸುತ್ತದೆ … ಒಂದೆರಡು ವರ್ಷ , ಆಮೇಲೆ ನನ್ನ frigidity ನೋಡಿ ಅವನೇ ತಣ್ಣಗಾಗಿಬಿಡುತ್ತಾನೆ ಸಮಾಧಾನ, ಮತ್ತು ನೋವಿನಂಚಿನಲ್ಲಿ ಒಂದು ಭರವಸೆ , ಹೆಣ್ಣು ಮಕ್ಕಳಿಗೆ ಮತ್ತೇನು ಆಸರೆ ?
————————————————————————————————————————————————————————————-
ನನ್ನ ಸ್ಪೇಸ್ ಅಂತ ನನಗೆ ಏನು ಉಳಿದಿರಲಿಲ್ಲ ..!!!
ಮನಸ್ಸು ಅಕ್ಷರಸಹ ನಡುಗುತ್ತಿತ್ತು , ಅವನು ಫೋನ್ ಮಾಡಿದಾಗ ನನ್ನ ನಂಬರ್ ಕಸ್ಟಮರ್ ಕಾಲ್ ಸೆಂಟರ್ ಜೊತೆ ಬ್ಯುಸಿ ಇದ್ದರು , ನನ್ನಿಂದಲೇ ಏನೋ ಅಚಾತೂರ್ಯ ಆಗಿಹೋಯಿತು ಎನ್ನುವಂತೆ … ಒಂದು ಕಾಲ್ ಬಂದರೆ , ಇದು ಮುಗಿಯುವವರೆಗೂ ಅವನು ಮಾಡದಿರಲಿ ಎನ್ನುವಂತ ಮೊರೆ ,ಭೀತಿ …… ದಿಗಿಲು ….
ಅವನಿಗೂ ಬೇಕ್ಕಿದ್ದುದ್ದೆ ಅದು , ಗಂಡನನ್ನು ನೆನೆದರೆ ಭಯಗೊಂಡು ಸೆರಗು ಸರಿಮಾಡಿಕೊಳ್ಳುವ ಸಿರೋಮಣಿ …v
ಇವತ್ತು ಬರುತ್ತೇನೆ ಅಮ್ಮನ ಮನೆಯಿಂದ ಅಂದು, ಹುಷಾರಿಲ್ಲ ಅಂತ ಅಲ್ಲೇ ಉಳಿದದ್ದು , ಎಂತ ನಂಬಿಕೆ ವಿದ್ರೋಹ !!!
ಸೆಂಡ್ ಆಫ್ ಪಾರ್ಟಿ ಅಂತ ಹೇಳಿ ಪರ್ಮಿಷನ್ ತಗೆದುಕೊಂಡು ಹೋದರು, ದಿನಬರುವ ವೇಳೆಗಿಂತ 10 ನಿಮಿಷ ತಡವಾಗಿದ್ದಕ್ಕೆ ಸಂಸಾರಸ್ತೆ ಹುಡುಗರ ಜೊತೆ ನಡುರಾತ್ರಿಲಿ ಪಾರ್ಟಿಮಾಡಬೇಕ ಅಂತ ಆಯಿತು …
ಎಥ್ನಿಕ್ ಡೇ ದಿನ ಸೀರೆ ಉಡಬೇಕು ಅಂತ ನಿರ್ಧಾರ ಮಾಡಿದ್ದು ಕಡೆಗಳಿಗೆಯಲ್ಲಿ, ಸಮಯ ಇತ್ತು ಅಂತ , ಆದರೆ ಗಂಡನಿಗೆ ಹೇಳದೆ ಉಟ್ಟುಕೊಂಡು ಹೋದರೆ, ಮುಚ್ಚು ಮರೆ!!!!
ಇನ್ನು ಜಗಳವಾಡಿದ್ದಾಗ ಪರ್ಮಿಷನ್ ತೆಗೆದುಕೊಳ್ಳದೆ ಟ್ಯಾಕ್ಸ್ ಸೇವಿಂಗ್ಸ್ ಎಂದು ಹಣ ವಿನಿಯೋಗಿಸಿದ್ದು ಗಂಡನನ್ನು ಕಡೆಗಣಿಸಿ ನಿರ್ಧಾರ ಮಾಡಿದಂಗೆ …
ಕ್ರೆಡಿಟ್ ಕಾರ್ಡ್ ಅಪ್ಲೈ ಮಾಡಿದ್ದು ಗಂಡನನ್ನು ಮೂಲೆಗುಂಪು ಮಾಡಿದಂಗೆ …..
ಹೆಲ್ಪ್ ಮಾಡುತ್ತೇನೆ ಅಂತ ಹೇಳಿದ್ದೆಲ್ಲ ಬರಿ ಬಾಯಿ ಮಾತಿಗೆ ಆಯಿತು, ನಿಜವಾಗಲು ಸಪೋರ್ಟ್ ಮಾಡುತ್ತಿಲ್ಲ, 2 -3 ಲಕ್ಷ ಆಗಿರಬಹುದು ದುಡಿದು , ಎಲ್ಲಿ ಹೋಯಿತು ಲೆಕ್ಕ…
—ಇನ್ನು ಮದುವಣಗಿತ್ತಿ ಅಲ್ವಾ , ಇನ್ನು ಗುಂಗಿನಿಂದ ಹೊರಬಂದಿಲ್ಲ , ಅಷ್ಟು ಬೇಗ ದುಡ್ಡು,ಲೆಕ್ಕ,ವ್ಯವಹಾರ ಮನಸು ಹೊರಳಿರಲಿಲ್ಲ….
—ಕಾಗದದ ಮೇಲೆ ಬರೆದು ತೋರಿಸಿದ್ದು ಸುಳ್ಳುಲೆಕ್ಕವಂತೆ , ಸೆಟಲ್ಮೆಂಟ್ ಹಣ ಬೇರೆ , ಸಂಬಳ ಬೇರೆ…
—ಇಲ್ಲ ನೋಟೀಸ್ periodna ಸಂಬಳವನ್ನೇ setttlement ಅಂತ ಕೊಡುವುದು …
ದೊಡ್ಡ ಭಾವನಿಗೆ ಕೊಟ್ಟಿದ್ಯೇನೆ?
ಅಮ್ಮನ ಮನೆಗೆ ವಾರಕ್ಕೆ 3 ದಿನ ಹೋಗಬಹುದು, ಯಾಕಂದ್ರೆ ಅಕ್ಕ ದಿನಾ ಮನೆಗೆ ಬರುತ್ತಾಳೆ ಅಂತ ಮದುವೆಗೆ ಮುಂಚೆ ಆಮಿಷ ಒಡ್ಡಿದ್ದು , ನಿನ್ನ ತಾಯಿ ಒಬ್ಬರೇ ಪಾಪ, ವೈದವ್ಯ ಕಾಡುತ್ತೆ, ಚೆನ್ನಾಗಿ ನೋಡಿಕೋ ಅನ್ನುತ್ತ ಸಿಂಪತಿ ಸುರಿಸಿ ಒಳ್ಳೆಯವನು ಅನ್ನಿಸಿಕೊಂಡಿದ್ದು ಮದುವೆಗೆ ಮುಂಚೆ ಅಲ್ಲವ …?
ಈಗ ಕೇಳಿದರೆ ಅಕ್ಕ ದಿನಾ ಬರೋದೆ ಇಲ್ಲ, ಮಕ್ಕಳನ್ನು ಸ್ಕೂಲ್ ಗೆ ಬಿಡೋಕೆ ಕಾರಣಾಂತ ಬರುತ್ತಾಳೆ , ಅಮ್ಮನ ಮನೆಗೆ ಹೋಗೋಕೆ ಕಾರಣಬೇಕು, ಡಬಲ್ ಪರ್ಮಿಷನ್ ಬೇಕು,..
ಮತ್ತೆ ಮುಂಚೆ ಹಾಗೆ ಅಂದಿದ್ದು,ಸಿಗ್ಗಿಲ್ಲದೆ ಹೇಳುತ್ತಾನೆ —‘ಅದು ನಿನ್ನ ಹಣೆ ಬರಹ ….’
ಎಂತ ಭೀಕರತೆ ಇರುತ್ತಿತ್ತು ಅವನ ಮಾತಿಗೆ, ತರ್ಕಕ್ಕೆ !! bmtc ಬಸ್ಸಿಗೆ ಇಂಡಿಕೇಟರ್ ಸದ್ದು ಸೂಕ್ತವಾಗುತ್ತಿರಲಿಲ್ಲ , ಪಕ್ಕದಲ್ಲಿ ನಮ್ಮ ಗಾಡಿಗೆ ಆತುಕೊಂಡೇ ಬಂದ ಟಾಟ ಸುಮೋದಲ್ಲಿ ನನ್ನ ಒಬ್ಬ ಭಗ್ನಪ್ರೇಮಿ ಇರಬಹುದು , ನನ್ನನ್ನು ನೋಡುವಂತೆ ಹುಡುಗನಿಗೆ ಪ್ರಚೋದಿಸಿದ್ದೆ ಉಬ್ಬಿಸಿ ನಿಂತುಕೊಂಡಿದ್ದ ನನ್ನ ನಿಲುವು ,ನಮ್ಮ ಮನೆಯ ನಾಯಿ ಬೇರೆ ಮನೆಗೆ ಹೋಗಿ ಬಾಲ ಅಲ್ಲಾಡಿಸಿದರೆ ಸರಿಯಾಗಿ ಭದ್ರವಾಗಿ ಕಟ್ಟದ್ದಿದ್ದುದ್ದು ಒಡೆಯನ ತಪ್ಪು , Stopನಿಂದ ಕ್ಯಾಬ್ pass ಆಯ್ತಾ ಅಂತ 2 ದಿನ ಮೆಸೇಜ್ ಮಾಡಿದ ಸ್ನೇಹಿತನಲ್ಲದ ಸಹೋದ್ಯೋಗಿಯನ್ನೂ ನಾನು ಮಡಗಿಕೊಂಡಿದ್ದೆ,ನನ್ನನ್ನು ಗುರಾಯಿಸುವ ಹುಡುಗನ ಜೊತೆ ನಾನು ಓಡಿಹೋಗುವೆ, ಇಂತ ಜಾಗದಲ್ಲಿ ಇದ್ದೇನೆ ಅಂತ ನಾ ಹೇಳಿದರು ಆಟೋ ಅಣ್ಣ ನಿಜ ನುಡಿದು ಪ್ರಮಾಣಿಸಬೇಕಿತ್ತು, ಕಡೆ ಕಡೆಗೆ ಮದುವೆಯ ಸಮಯದಲ್ಲಿ ನಾವು ಮನೆ ಬದಲಾಯಿಸಿದಕ್ಕು ಏನೋ ಬಲವಾದ ಕಾರಣವಿತ್ತು , ಮೊಗು ಮಾಡಿಕೊಳ್ಳಲು ,ಕಡಿಮೆ ಪ್ರಯಾಸದ ಪ್ರಯಾಣವಿರುವ ಕಂಪನಿ ಹುಡುಕಿಕೊಂಡರೆ,ಅದರಲ್ಲಿ ಹಳೆ ಗೆಳೆಯನ ಕಾರಣ ಗೋಚರಿಸುತ್ತಿತ್ತು !!!!
ಅದೆಷ್ಟನೆಯೋ ಬಾರಿಯೋ ಕೇಳಿದ್ದ , ಯಾಕೆ ಒಂದು ಕಾಲ್ ಮಾಡಿದ್ದೆ? … ಕೆಲಸದ ನಿಮಿತ್ತ , ತಮ್ಮನಂತ ಹುಡುಗು ಅವನು…. ಉಹೂ … ಬೆನ್ನಿಗೆ ಬಿದ್ದ ಬೇತಾಳ,ಮತ್ತೆ ಮತ್ತೆ ಅದೇ … ಸಾಕಾಗಿ ಒಮ್ಮೆ ಅಂದೇ, ಏನಿವಾಗ , ನನ್ನ ಪರ್ಸನಲ್ ವಿಷಯ …… ರೆಕಾರ್ಡ್ ಮಾಡಿದ್ದ , ನೆಂಟರೆದುರು ಹಾಕಿ ತೋರಿಸಿದ … ಅವನ ಕಡೆಯವರೆಂದರು ‘ಗಂಡನ ಹತ್ತಿರ ಹೆಂಡತಿಗೆ ಪರ್ಸನಲ್ ಏನು?’ … ನನ್ನ ಕಡೆಯವರು ಅಂದರು , ‘ಅದರಲ್ಲೇನಿದೆ ರೇಗಿ ಮಾತಿಗೆ ಅಂದಿದ್ದು ಅಷ್ಟೇ …. ‘
–ಅಷ್ಟೇನಾ…???? ಕತ್ತಿ ಜಳಪಿಸಿ ಕಟಕಟನೇ ಹಲ್ಲುಕಡಿಯುತ್ತಿದ್ದ …ಇವತ್ತು ಏನೇ ಆದರು ಉಳಿಸಲ, ಈ ಸೂಳೆಮುಂಡೆನಾ……
ಅವನಕ್ಕ ಕುಮ್ಮಕ್ಕು ಹೇಳಿದ್ದಳು , ಈ ಕೆಲಸ ಅವತ್ತೇ ಮಾಡಿದ್ದಿದ್ದರೆ , ಪೋಲಿಸ್ ವರೆಗೂ ಹೋಗುತ್ತಿದ್ದಳ ?
ಮಿಕ್ಕಿದೆಲ್ಲ ಸರಿ ಆದರೆ ,ಈ ಆಪಾಧನೆಗಳಿವೆಯಲ್ಲ !!!ಹಲವು ಬಾರಿ ಹೇಳಿದ್ದೆ ಕೂಗಾಡುತ್ತ , ಕಿರುಚಾಡುತ್ತ , ಅಳುತ್ತ , ಕೈ ಸುಟ್ಟುಕೊಳ್ಳುತ್ತಾ, ಕೈ ಕೂಯ್ದುಕೊಳ್ಳುತ್ತಾ, ಮನೆ ದೇವರು, ತೀರಿಕೊಂಡ ತಂದೆ ಎಲ್ಲರ ಮೇಲೆ ಆಣೆ ಮಾಡುತ್ತಾ , ನನಗೆ ಯಾರೊಂದಿಗೂ ಕೆಟ್ಟ ಸಂಬಂಧವಿಲ್ಲಾ , ಇರಲಿಲ್ಲ, ಒಳ್ಳೆ ಹುಡುಗಿ ನಾನು !!!!!!!!!!!!!
——-
ನನ್ನೇ ಕೇಳುತ್ತಾನೆ — ‘ಗಂಡನ್ನನ್ನ ಹೇಳದೆ ಕೇಳದೆ ಇಂಟರ್ವ್ಯೂ ಅಟೆಂಡ್ ಮಾಡಿದ್ದು ಮಹಾಪರಾಧ ಅಲ್ಲದೆ ಮತ್ತೇನು ?’
… ಮನೆ ದೇವರಾಣೆ ನಿದ್ದೆಯಿಂದೆಬ್ಬಿಸಿ ಹೇಳಿದೆ , ನೀನು ಕೇಳಿಸಿಕೊಂಡಿಲ್ಲ ಅಷ್ಟೇ ….
‘ಇಂಟರ್ವ್ಯೂಗೆ ಹೋಗುತ್ತೇನೆ ಅಂದು ಬಿಟ್ಟರೆ ಸಾಕ , ಯಾಕೆ, ಎಲ್ಲಿ, ಹೇಗೆ ಅಂತೆಲ್ಲ ವಿವರಣೆ ಬೇಡವ? …. ‘
‘…ಹೋಗಿದ್ದು ಇಂಟರ್ವ್ಯೂ ಉತ್ತರಿಸೋಕೆ ಅಷ್ಟೇ ಅಲ್ಲವ ,ಕಂಪನಿ ಸೇರಿಯೇ ಬಿಡುತ್ತೇನೆ, ಸೇರಲೇಬೇಕು ಅಂತ ಏನು ಇಲ್ಲವಲ್ಲ! ಅಷ್ಟಕ್ಕೇ ಯಾಕೆ ದಂಡಿಸಬೇಕು , ನಿಮ್ಮಮ್ಮ ವಾಚಾಮಗೋಚರ ಯಾಕೆ ಜಗಳ ತೆಗೆಯಬೇಕು…?’
‘ಇಲ್ಲ ಬೀದಿ ಸುತ್ತಕ್ಕೆ ಬೀದಿ ಬಸವಿನ ಬಿಟ್ಟು ಬಿಡಬೇಕು ಅಲ್ವಾ ನಿನಗೆ….?’
ಅತ್ತೆ ಬೈದರು ಅಂತ ಅಳುತ್ತ ಫೋನ್ ಮಾಡಿದರೆ , ಸಮಾಧಾನದ ಮಾತಿರಲಿ , ಹೋಗಲಿ ಬಿಡು ಇರಲಿ, ‘ಎಲ್ಲರನ್ನು ಬರಹೇಳುತ್ತೇನೆ ನ್ಯಾಯ ಪಂಚಾಯ್ತಿ ಮಾಡೋಣ …’
ಅವರು ಬೈದಿದ್ದಕ್ಕಿಂತ ,ಈ ಅನ್ಯಾಯದ ಪಂಚಾಯ್ತಿಯಾ ಮಾತೆ ಅಲ್ಲವ, ನನ್ನನ್ನು ಚೂರು ಮಾಡಿದ್ದು !!!
ವ್ಯಕ್ತಿಯೊಬ್ಬನಿಗೆ ಕಸಿದುಕೊಳ್ಳದೆ ಉಳಿಸಬೇಕಾಗಿದ್ದ ಕನಿಷ್ಠ ಮಟ್ಟದ ಸ್ವಾತಂತ್ರ್ಯ , ವ್ಯಕ್ತಿ ಮಟ್ಟದ ನಿರ್ಧಾರಗಳನ್ನು ತಾನೇ ಮಾಡಲುಬೇಕಾದ ಸ್ಪೇಸ್ ..ಅದ್ಯಾವುದರ ಅರಿವು ಅವನಿಗಿರಲಿಲ್ಲ ….ಪ್ರತಿಯೊಂದನ್ನು ಗಂಡನ -ಅತ್ತೆಯ ಹಕ್ಕು-ಅಧಿಕಾರಗಳಲ್ಲಿ ತೂಗಿ , ತಪ್ಪು ಹೆಕ್ಕಿ,ದಂಡನೆಗೆ ಈಡು ಮಾಡುವ ಪದ್ಧತಿ ಉಸಿರು ಕಟ್ಟಿಸುವುದು …
ಇಲ್ಲ ಅವನು ಒಳ್ಳೆಯವನೇ… ಒಮ್ಮೊಮ್ಮೆ ಹೀಗೆಲ್ಲ ಹೆಂಡ ಕುಡಿಸಿದ ಕೋತಿಯಂತೆ ಆಡಿಬಿಡುತ್ತಾನೆ ಅಷ್ಟೇ ….
ಆದರೆ ನಾನು ಎಷ್ಟು repressionge ಒಳಗಾಗಿದ್ದೆ ….ಹೇಳಲಾಗದೆ, ಅನುಭವಿಸಲಾಗದೇ ಉಸಿರು ಕಟ್ಟಿ ಕಟ್ಟಿ ಸಾಯುತ್ತಿದ್ದೆ ..
ಅವನಿಗೆ ಅರ್ಥ ಮಾಡಿಸುವ ಮಾರ್ಗವೇ ಇರಲಿಲ್ಲ…
ಅವನು ಎದುರಿಗೆ ಬಂದರೆ ಬಾಯಿ ಕಟ್ಟಿ ಹೋಗುತ್ತಿತ್ತು … ಭಯ ಭಯ ಭಯ !!!
ಮಾತನಾಡಲು ಸಾವಿರ ಇದ್ದರು,ಸಾವಿರಬಾರಿ ಯೋಚಿಸಿ,ಯೋಚಿಸಿ ಹೇಗೆ ಹೇಳಬೇಕು ,ಎಷ್ಟು ಹೇಳಬೇಕು, ಅವನು ಅರ್ಥ ಮಾಡಿಕೊಳ್ಳಬಹುದಾದ ವಿಧಾನ , ಅದರ ಮುಂದಿನ ಘೋರಪರಿಣಾಮ ಎಲ್ಲವುಗಳ ಬಗ್ಗೆ ಸಮಗ್ರವಾಗಿ ಚಿಂತಿಸಿ ಮಾತು ಹೊಂದಿಸಬೇಕಿತ್ತು …ಅವನಿಗೆ ನೋವಾಗದಂತೆ, ಅವನು ಕೆರಳದಂತೆ !!
ಬಾಳಸಂಗಾತಿಯವನು, ಗೆಳೆಯನಂತೆ ಮನಸನ್ನು ಹಂಚಿಕೊಳ್ಳಲು ಸಲಿಗೆ ಇರಬೇಕಲ್ವ …
–ಅಯ್ಯೋ ಇದೆಲ್ಲ ಇಂದಿನ ಕಾಲದ ಸಾಂಗತ್ಯದ ಅವಶ್ಯಕತೆಗಳು …
ಅವರ ಮನೆಯವರ ಕಾಲ ನಿಂತು ಹೋಗಿ ಎಷ್ಟು ಜಮಾನವಾಗಿದೆ!!!!
ಅವನೇ ಅನ್ನುತ್ತಿದ್ದ ನನ್ನನ್ನು ಹ್ಯಾಂಡಲ್ ಮಾಡುವುದು ನಮ್ಮಮ್ಮನಿಗೆ ಮಾತ್ರ ಸಾಧ್ಯ….
ಬೆಳಗ್ಗೆ ಎದ್ದೇಳುವಾಗಲೇ ಕಠೋರತೆಯ ಸೋಗು , ರೂಮಿಂದ ನಡೆದು ಹೋಗುವಾಗ ಮಹಾರಾಜನ ಆವಾಹನೆ , ಪಾಳೆಗಾರನ ಗತ್ತು , ಯಜಮಾನಿಕೆಯ ಪ್ರತಿಷ್ಟಾಪನೆ ,ಗಂಡಸಿನ ಕಳೆ….
ಮನೆಯ ಸದಸ್ಯರನ್ನು ಸುಲಭವಾಗಿ ಮಾತಿಗೆಳೆಯುವಂತೆ ಮಾತನಾಡಿಸಲು ಸಾಧ್ಯವಾಗುತ್ತಿರಲಿಲ್ಲ ….
ಮಾತಾಡುವುದು ಕೆಟ್ಟಿತ್ತು , ರಾಜಗಾಂಭೀರ್ಯದಲ್ಲಿ ಪೇಪರ್ ಓದುತ್ತಿದ್ದವನು , ಕೂಲಿ ಆಳಂತೆ ಮನೆಗೆಲಸದಲ್ಲಿ ತೊಡಗಿರುವವಳ ‘ತಪ್ಪು’ಗಳನ್ನೂ ಅವನಮ್ಮನ ಎದುರಲ್ಲಿ ಎತ್ತಿತೋರಿಸಿ ,ಕುಕ್ಕಿ ಸೆದೆ ಬಡೆಯುದ್ದಿದರೆ ಅಂದು ನನ್ನ ಹಗಲು ಸುಮಧುರವಾಗಿ ಶುರುವಾಗುತ್ತಿತ್ತು ..
ಇನ್ನು ಆಫೀಸಿಗೆ ಹೋದಮೇಲೆ business magnet ಆಗಿಬಿಟ್ಟಿರುತ್ತಿದ್ದ..ಅವನ convinient ಟೈಮ್ ನೋಡಿಕೊಂಡು ನಾನು ಮಾತಾಡಬೇಕಿತ್ತು , ಹೆಚ್ಚೆಂದರೆ 3 ನಿಮಿಷದ ಸಂಭಾಷಣೆ ಅಷ್ಟೇ ,ಎಲ್ಲ ಚೆನ್ನಾಗಿದ್ಯ ಅಲ್ಲಿ ಅಂತ ವಿಚಾರಿಸಿಕೊಳ್ಳಬೇಕಿತ್ತು ಅಷ್ಟೇ , ಫೋನ್ ಮಾಡಿದರು ಮಾಡದ್ದಿದರು ಅವನ moodಡಿನ ಮೇಲೆ ತಪ್ಪು ಸರಿ ಸೃಷ್ಟಿ ಆಗಿಬಿಡುತ್ತಿತ್ತು ….
ಸಂಜೆಗೆ ಅವನು ದುಡಿದು ಬಂದಿರುತ್ತಿದ್ದ, ನಾನು ದುಡಿದು ಬರುತ್ತಿದ್ದೆ …
ಆದರೆ ಯುದ್ಧ ಮಾಡಿ, ರಾಜ್ಯಗೆದ್ದು ಬಂದವನನ್ನು ಆರತಿ ಎತ್ತಿ ಒಳಗೆ ಕರೆದುಕೊಳ್ಳುತಿರಲಿಲ್ಲವಷ್ಟೇ ….!!!
ಮತ್ತೆ ಅವನ ಮೂಡ್ ನೋಡಿಕೊಂಡು ವ್ಯವಹರಿಸಬೇಕಿತ್ತು ..ಮೂಡ್ ಸ್ಟಡಿ ಮಾಡಿ ನಿರ್ಧಾರಕ್ಕೆ ಬರುವಷ್ಟರಲ್ಲಿ ಒಂದೆರಡು ಗಂಟೆ ಕಳೆಯುತ್ತಿತ್ತು …ಕಲಿತುಕೊಳ್ಳುತ್ತಿದ್ದೆ ಅವನಮ್ಮ ಹೇಗೆ ಅನುಭವ ಮಾತ್ರದಿಂದ ಮಗನ ಮೂಡ್ ಗ್ರಹಿಸಿ ಮಾತು ಹೇಗೆ ತೆಗೆಯುತ್ತಾರೆ ಎಂದು… ಆದರು ನಡುಮನೆಯಲ್ಲಿ ಒಬ್ಬನನ್ನೇ ಮಾತನಾಡಿಸುವಷ್ಟು ಧೈರ್ಯ ಇನ್ನು ಬಂದಿರಲಿಲ್ಲ ಅಷ್ಟೇ ನನಗೆ !!!!
ರೂಮಿಗೆ ಬಂದವನು ,ಬೆಳಗಿನಿಂದ ನಾನು ಮಾಡಿರಬಹುದಾದ ತಪ್ಪುಗಳನ್ನು ಲಿಸ್ಟ್ ಮಾಡಿಕೊಂಡು, ಅಥವ ಅವನ investigationನಿಂದ ದೃಡವಾದ ಕೃತ್ಯಗಳನ್ನು ಬಯಲುಮಾಡಿ ಬೈಯ್ಯದೆ ,ಮುನಿಸಿಕೊಂಡು ಮಲಗದೇ , ನಗುನಗುತ್ತ ಮಲಗಿದರೆ ಅಲ್ಲಿಗೆ ನನ್ನ ದಾಂಪತ್ಯದ ಅದ್ಬುತ ಯಶಸಿನ ದಿನ ಅದಾಗಿ ಬಿಡುತ್ತಿತ್ತು…
ತಪ್ಪು ನಾನೇ ಮಾಡಿದರು , ಅವನೇ ಮಾಡಿದರು ಧೂಷಿಸಿಕೊಳ್ಳಬೇಕಾದವಳು ನಾನಷ್ಟೇ .. ಕಡಲೆಯನ್ನು ಬೆಟ್ಟ ಮಾಡಿ ಬಯ್ಯುವ ಹಕ್ಕು ಅವನಿಗಿತ್ತು, ಯಾಕೆಂದರೆ ನಾನು ಹೆಂಡತಿ … ಅವನ ತಪ್ಪನ್ನು ಕಂಡಿಸಿ ಹೆದರುಹಾಕಿಕೊಳ್ಳಲು ಸಾಧ್ಯವೇ, ಯಾಕೆಂದರೆ ಅವನು ಗಂಡ …!!
ಗಂಡ ಎಂದರೆ ಶ್ರೇಷ್ಠ , ಪರಿಶಿಷ್ಟ , ಮತ್ತು ಪರಿಪೂರ್ಣ !!!!!!
ಅಷ್ಟಕ್ಕೂ ಸರಿ ತಪ್ಪುಗಳ ಲೆಕ್ಕ ಯಾಕೆ, ಸಂಸಾರವೆಂದರೆ ಹೊಂದಾಣಿಕೆ, ಅನುಸರಣೆಗಳಲ್ಲವೇ ….?
ಅವನ ಅಮ್ಮ ಹೇಳುತ್ತಾರೆ ಎಲ್ಲಾದರೂ ಉಂಟೆ…? ಹೆಂಡತಿ ತಪ್ಪು ಮಾಡಿದರೆ ಶಿಕ್ಷೆ ಕೊಡುವುದು ಬೇಡವೇ …?
ಸಮಾನತೆಯ ಮಾತು ಅತ್ತಟ್ಟಿಗಿರಲಿ !!!!… ತೀರ ತೀರ ಅನ್ಯಾಯ ಅನಿಸಿ, ಉಸಿರು ಗಟ್ಟಿ , ಅವನಿಗೆ ಅರ್ಥಮಾಡಿಸಬೇಕು ಅನಿಸಿದಾಗ ಬೆಳಗ್ಗೆ ಆಫೀಸಿನಿಂದ ಫೋನ್ ನಲ್ಲಿ appointment ತೆಗೆದುಕೊಳ್ಳುತ್ತಿದ್ದೆ , ಇವತ್ತು ರಾತ್ರಿ ನಿನ್ನ ಹತ್ತಿರ ನಾನು ಮಾತಾಡಬೇಕು , ಪ್ಲೀಸ್ ಬೇಗ ರೂಮಿಗೆ ಬಾ …
ಅವತ್ತೇ ಅವನಿಗೆ 12 ಗಂಟೆವರೆಗೂ ಟೀ . ವಿ ನೋಡುವುದಿರುತ್ತಿತ್ತು , ತಡವಾಗಿ ಬಂದವನು, ನಿದ್ದೆ ಹೋಗದೆ ಎಚ್ಚೆತ್ತು ಕಾಯುತ್ತಿದ್ದವಳಿಗೆ ಬೆನ್ನು ಮಾಡಿ, ಕಂಬಳಿ ಮುಸುಕು ಹಾಕಿಕೊಂಡು ಮಲಗಿಬಿಡುತ್ತಿದ್ದ, ನಿದ್ದೆ ಹೋದನೇನೋ ಅನ್ನುವಂತೆ … ಅವಮಾನವಾಗಿ ಹೋಗುತ್ತಿತ್ತು , ಹೆಣದ ಮುಂದೆ ಬಾಯಿ ಬಡಿದುಕೊಂಡು ಗೋಳಾಡುವಂತೆ , ಹಿಡಿದು ಅಲುಗಾಡಿಸಿ ಅಲುಗಾಡಿಸಿ ಮಾತು ಆಡುತ್ತಿದ್ದೆ, ಅವನ ನಿರ್ಲಿಪ್ತತೆಯನ್ನು ನೋಡಿ ದನಿಯೂ ಏರುತ್ತಿತ್ತು , ಎಲ್ಲ ಗಂಡ ಹೆಂಡತಿಯ ಮಧ್ಯೆ ನಡೆಯುವಂತೆ ….
ಧಡ್ ಅಂದ ಎದ್ದು ಹೋಗಿ ನಡುಮನೆಯಲ್ಲಿ ಮಲಗಿಬಿಡುತ್ತಿದ್ದ .. ಹೆಂಡತಿ ನಿರ್ದಯಿಯಾಗಿ ಹೊರಗೆ ಹಾಕಿದಳೇನೋ ಅನ್ನುವಂತೆ…ಅವನಮ್ಮ ಎದ್ದು ಬರುತ್ತಿದ್ದರು,– ‘ಯಾಕೋ ಏನಾಯ್ತೋ…ಏನಾಯ್ತಮ್ಮ, ಏನು ಮಾಡಿದೆ..?’
ಅತ್ತೆ ಬಿಡುವನೇನೋ ಅನ್ನುವ ಹಾಗೆ ನನ್ನ ಮೇಲೆ ಚಾಡಿ ಹೇಳಿಬಿಡುತ್ತಿದ್ದ…
‘ಯಾಕಮ್ಮ, ನಾವೇನೊ ಕಡಿಮೆ ಮಾಡಿದಿವಿ,ಯಾಕೆ ಹೀಗೆ ಮಾಡಿದೆ’ ಅಂತೆಲ್ಲ ಸೂಕ್ತಿಗಳು ಶುರುವಾಗುತ್ತಿತ್ತು…
ಅಷ್ಟಕ್ಕೇ ನಿಲ್ಲದೆ ಎದೆಎದೆ ಬಡಿದುಕೊಂಡು ರುಡಾಲಿ ಪೋಸು ಕೊಡುತ್ತ ಇದ್ದ ಒಬ್ಬ ಮಗನಿಗೆ ನಾನೇ ಇಂತ ಅನ್ಯಾಯ ಮಾಡಿಬಿಟ್ಟೆ,ಇಂತ ಹುಡುಗಿಯನ್ನು ಮದುವೆ ಮಾಡಿಸಿ ಮಗನ ಜೀವನ ಹಾಳುಮಾಡಿಬಿಟ್ಟೆ ಅಂತ ಹಣೆ ಹಣೆ ಚಚ್ಚಿಕೊಳ್ಳಲು ಶುರುವಿಟ್ಟರೆ, ಹುಚ್ಚೆ ಹಿಡಿದುಬಿಡುತ್ತಿತ್ತು…
ಜೊತೆಗೆ -‘ಇಂತ ಹುಡುಗೀನೆ ಬೇಕು ಅಂತ ಒಪ್ಪಿದೆಯೇನೋ..? ಕೇಳಿದ್ದರೆ ಗಂಟೆಗೆ ಒಬ್ಬಳನ್ನು ಕರೆದು ನಿಲ್ಲಿಸುತ್ತಿದ್ದೆನಲ್ಲೋ…..’
ಕಣ್ಣಲ್ಲಿ ನೀರು … ಬಾಯಿಕೊಟ್ಟೆನೆಂದರೆ ಮುಗಿಯಿತು ,
–‘ನೋಡುದ್ಯೇನಮ್ಮ, ನಿನಗೆ!!!!!’ ಇವತ್ತು ಏನೇ ಆದರು ಅಂತ ಶುರುಮಾಡಿ ಇಬ್ಬರು ಸೇರಿಕೊಂಡು ನಡುರಾತ್ರಿಯಾಗಿದ್ದರು ನನ್ನ ಸಂಬಂಧಿಕರಿಗೆ ಕರೆಯಾನಿಸಿ ದೂರು ತಲುಪಿಸಿ , ನ್ಯಾಯ ಪಂಚಾಯ್ತಿಗೆ ಆಹ್ವಾನ ನೀಡುತ್ತಿದ್ದರು …..ಹಾಗೆ ಎಷ್ಟು ದಿನ ಅಳುತ್ತಲೇ ರಾತ್ರಿ ಮುಗಿಸಿದ್ದೆ !!!!
ಗಂಡ ಎಂದರೇನು , ಬೆತ್ತ ಹಿಡಿದು ಬುದ್ಧಿ ಕಲಿಸುವ ಟೀಚೆರಾ? ಶಿಕ್ಷೆ ಕೊಡುವ ಕಾನೂನ ?
ನನ್ನ ಮಾತನೆಲ್ಲ ಯಾವಾಗ ಹೇಳಿಕೊಳ್ಳಲಿ ….
ಆಫೀಸಿನಲ್ಲಿ ನಡೆದ ಘಟನೆ ಹಂಚಿಕೊಳ್ಳುವಾಗ ಅಲ್ಲಿ ಯಾವ ಹುಡುಗರ ಸುಳಿವು ಇರಬಾರದಿತ್ತು , ತವರು ಮನೆಯ ಸುದ್ಧಿಯಲ್ಲಿ ಅಲ್ಲಿನ ಬಡತನ,ವ್ಯವಹಾರ, ರಹಸ್ಯಗಳು ಇರಬಾರದಿತ್ತು , ಇನ್ನು ನನಗೆ t .v ನೋಡುವ ಅವಕಾಶ ಇರಲಿಲ್ಲವಾದ್ದರಿಂದ, ಹೊರಗಿನ ಪ್ರಪಂಚದ ಸುದ್ಧಿಗಳೇ ತಿಳಿಯುತ್ತಿರಲಿಲ್ಲ ಮಾತಾಡಲು… ಅಪ್ಪಿತಪ್ಪಿ ಏನಾದರು ಕನಸುಗಳನ್ನು ಹೇಳಿದ್ದೆನ, ಅವೆಲ್ಲ ವಾಂತಿಯಾಗಿ ಬಿಡುತ್ತಿದ್ದವು ನೆಂಟರೆದುರು ಗಳಗಳನೆ , ಗಬ್ಬು ವಾಸನೆಯೊಂದಿಗೆ …
ಗಂಡ ಹೆಂಡತಿ ಮಧ್ಯೆ ಚರ್ಚಿತವಾದ ಯಾವ ಸಂಭಾಷಣೆಗಳು ನಮ್ಮಿಬ್ಬರ ಮಧ್ಯೆ ನಿಲ್ಲುತ್ತಿರಲಿಲ್ಲ … ಕಾಲದಲ್ಲಿ ನೆಂಟರೆದುರು ಅನಾವರಣಗೊಂಡುಬಿಡುತ್ತಿತ್ತು , male version ನಲ್ಲಿ , fabricatedಆಗಿ ,ಮಸಾಲೆ ಸೇರಿಕೊಂಡು –ಏಕಾಏಕಿ ನಾನು ದುಷ್ಟಳಾಗಿ ಬಿಡುತ್ತಿದ್ದೆ ಎಲ್ಲರೆದುರು …
ಒಮ್ಮೆ ಮದುವೆಗೆ ಮುಂಚೆ ನನಗೆ ಅಪ್ಪನ ಹೆಸರಲ್ಲಿ ಅಮ್ಮನಿಗೆ ಮನೆ ಕಟ್ಟಿಸುವ ಕನಸು ಇದೆ ಅಂದಿದ್ದೆ ..ಅಷ್ಟೇ, ಮದುವೆ ಆದ ಮೇಲೆ ತವರಿಗೆ ದುಡ್ಡುಸಾಗಿಸುವ ಕಳ್ಳಿಯಾಗಿ ಬಿಟ್ಟಿದ್ದೆ, ಅವಳ ಮನೆ ಉದ್ದಾರ ಮಾಡಿಕೊಳ್ಳೋಕೆ ಮದುವೆ ಆಗಿರೋದು ಅಂದು ಬಿಟ್ಟಿದ್ದ !!!
ಇನ್ನೊಮ್ಮೆ ಕಿಚಾಯಿಸಲು ನಗುತ್ತ, ‘ನಮೂರ ಜಮೀನಲ್ಲಿ 40 ಸೈಟ್ ಇದೆ ನನಗೆ ಎಂದಿದ್ದೆ ‘,
ಅದು ಜಂಭ, ದುರಾಂಕಾರದ ಪರಮಾವಧಿ ತಲುಪಿ –‘ಹೋಗೋ ಲೇ ,ನಿಂದೇನು ಮಹಾ, ನನ್ನ ಹತ್ತಿರ 40 ಸೈಟ್ ಇದೆ ‘ ಎಂದಾಗಿತ್ತು
ಇನ್ನೊಮ್ಮೆ ಮಾತಾಡುತ್ತ, ‘ಇಷ್ಟೊಂದು ಬಳಗ ಕಟ್ಟಿಕೊಂಡು ಅಷ್ಟು ಚಿಕ್ಕ functionಗೆ ಹೋಗೋದ’, ಅಂದೇ..
‘ ನಮಗೆಲ್ಲ ತಿನ್ನೋಕೆಗತಿ ಇಲ್ಲ ಅಂತ, ಊಟಕ್ಕೆ ಹೋಗ್ತೀವಂತೆ’ ಎಂದಿದ್ದ ಎಲ್ಲರನ್ನು ಕೂಡಿಸಿಕೊಂಡು..
ಅಳಿಯನ ಉಪಚಾರ ಕಮ್ಮಿಯಾಯಿತು , ನಮ್ಮ ಚಿಕ್ಕಪ್ಪ, ಅವರ ಅಳಿಯನಿಗೆ ಹೇಗೆಲ್ಲ ಏರ್ಪಾಡು ಮಾಡುತ್ತಾರೆ ಎನ್ನುವಾಗ , ‘ನೀನು ಅಂತ ಮನೆ ನೋಡಿ, ಅಳಿಯ ಆಗಬೇಕಿತ್ತು’ ಅಂದೇ ..
ಅದೇ ಚಿಕ್ಕಪ್ಪನ ಎದುರು ‘ನಿನ್ನ ಮಗಳಿಗೆ ಐಬಿದೆ ,ಅದಕ್ಕೆ ನೀನು ಮನೆ ಅಳಿಯನನ್ನು ಮಾಡಿಕೊಂಡಿದೀಯ’ ಅಂದಳು ಅಂದುಬಿಟ್ಟ!!!
ಏನೇ ಹೇಳಿದರು ಅದು ಅರ್ಥಕ್ಕಿಂತ ಅಪಾರ್ಥವನ್ನೇ ಮಾಡಿಸುತ್ತಿತ್ತು, ಮತ್ತು ಮುಂದಿನ ಪಂಚಾಯ್ತಿಗೆ ಆಗಬಹುದಾಗಿದ್ದ ನೋಟ್ಸ್ ಪ್ರಿಪೇರ್ ಆಗುತ್ತಿತ್ತು …!!!
‘ಮಾತಿಗಿಂತ ಮೌನವೇ ಸಹ್ಯ ಮತ್ತು ಲಾಭಯುಕ್ತವಾಗಿತ್ತು ‘.
ಬಹುಶ ನಮಗೊಂದು ಮಗುವಾದಮೇಲೆ , mental maturity ಬರುತ್ತದೇನೋ ಅಂದು ಕೊಳ್ಳುತ್ತಿದ್ದೆ …
ಯಾಕೆ ಬೇಕಿತ್ತು ಅವೆಲ್ಲ !
ಗಲಾಟೆ ,ರಂಪ!!!? ರಾಮಾಯಣವಿಲ್ಲದೆ ದಿನಗಳು ಹುರುಳಿದರೆ ಸಾಕು! ನೆಮ್ಮದಿಗಿಂತ ಅಮೂಲ್ಯ ವಸ್ತು ಯಾವುದಿದೆ ಜೀವನದಲ್ಲಿ ??
ಕೂತರು ನಿಂತರು ಸುಳಿವು ನೀಡದಂತೆ ಶುರುವಾಗಬಹುದಾಗಿದ್ದ ಸ್ಪೋಟನೆಗೆ ಹೆದರಿ,ಕೂರುವುದೋ ನಿಲ್ಲುವುದೊ ಸರಿಯಾಗಿ ತಿಳಿಯದೆ ವಿಲವಿಲ ಒದ್ದಾಡುತ್ತಾ, ಭಯಗ್ರಸ್ತಲಾಗುತ್ತಿದ್ದೆ…. ಭೀತಿ,ಭಯ ಆವರಿಸಿತ್ತು !
ಗೊತ್ತೇ ಆಗದಂತೆ ನನ್ನ ಮಾತುಗಳನ್ನು , ಸ್ಪೇಸ್ ಅನ್ನು ಕಸಿಯುತ್ತ ಹೋಗುತ್ತಿದ್ದ…
ರಗಳೆ ಆಗದಿರಲಿ ಅಂತ ಮಾತಾಡದೆ ತಳೆದ ಮೌನ , ಮನದ ಮೂಲೆಯಲ್ಲಿ ಒತ್ತಡವಾಗಿ ಶೇಕರವಾಗುತ್ತಿತ್ತು ! ಅಸ್ಪೋಟನೆಗೆ ಹಾತೊರೆದಂತೆ !
ಬರಬರುತ್ತ ಎಷ್ಟು ಒಂಟಿಯಾಗಿಬಿಟ್ಟೆ ….ಹೊಸ ಮನೆಯಲ್ಲಿ , ಹೊಸ ಜನರೊಡನೆ .. ಪ್ರೀತಿಸುವವರು, ನನ್ನವರು ಯಾರು ಇಲ್ಲವೇನೂ ಅನ್ನುವಂತೆ …
ಅವನನ್ನು ಪಡೆಯುವ ತವಕ..ಅವನ ಪ್ರೀತಿ ಬೇಕು ನನಗೆ ..ಅವನಿಗೆ ಬೇಜಾರಾಗದಿರಲಿ ಅಂತ accept ಮಾಡಿಕೊಳ್ಳುತ್ತ ಹೋಗುತ್ತಿದ್ದೆ, ನನ್ನೆಲ್ಲ ಗುರಿ ಅವನ ಸಂತೋಷವೇನೋ ಎನ್ನುವಂತೆ ಸದಾ ಅವನನ್ನು ಪ್ರಸನ್ನಳಾಗಿಸುವ ಹಾದಿ ಯೋಚಿಸುತ್ತಿದ್ದೆ…ಅಪ್ಪಿ ತಪ್ಪಿ ಅವನು ಕೊಂಚ ಹೊಗಳಿದರು, ಆನಂದಭಾಷ್ಪವೆ ಸುರಿದು ಹೋಗುತ್ತಿತ್ತು …
ಅಲ್ಲಿಗೆ ಅವನ ಉದ್ದೇಶ ಈಡೆರಿತ್ತು ..ನನ್ನ ಮನಸಿನ ಮೇಲೆ ಹಿಡಿತ ಸಾದಿಸಿದ್ದ , ಯಕ್ಷನಂತೆ!!!!!
ಆದರು ಅವನನ್ನು ತುಂಬಾ ಪ್ರೀತಿಸುತ್ತಿದ್ದೆ ….
ಅವನ ಈ ದಬ್ಬಾಳಿಕೆಗೆ ಕರಣ ಇಲ್ಲದಿಲ್ಲ ..
ಕಾಲ ಕಾಲಕ್ಕೆ ಕಿವಿ ಊದುತ್ತಿದ್ದರು, ಅವನನ್ನು ಎಚ್ಚರಿಸುತ್ತಿದ್ದರು —‘ ಅಕ್ಷರ ಕಲಿತ ಹೆಣ್ಣು, ವ್ಯವಹಾರ ಬಲ್ಲ ಹೆಣ್ಣು, ಅಂಕೆಯಲ್ಲಿಟ್ಟುಕೊ’ ‘ಅತ್ತೆ ಮನೆಗೆ ಜಾಸ್ತಿ ಹೋಗಬೇಡ, ನಿನಗೇನಾದರೂ ಅಲ್ಲಿ ಮರ್ಯಾದೆ ಗಳಿಸಿಕೊಟ್ಟಿದ್ದಾಳ ? ಎಲ್ಲ ವ್ಯವಹಾರಾನು ಅವಳ ಭಾವನಿಗೆ ಕೊಟ್ಟಿದ್ದಾರೆ , ನೀನೋ ಅಳಿಯ ಎಲ್ಲಿದೆ ಸಮಪಾಲು…..!!!!’
ವಿಷಪ್ರಾಶನವಾಗುತ್ತಿತ್ತು…
ಪಕ್ಕ ವ್ಯವಹಾರಸ್ತ , ಚಾಣಾಕ್ಷ್ಯ ,ಬುದ್ದಿವಂತ —ನಿನಗಿಂತ ನಾ ಚೆನ್ನಾಗಿ ತಿಳಿದವನು ,ವ್ಯವಹಾರ ಬಲ್ಲವನು ಎನ್ನುವ ಜಂಭ ,ಮೇಲರಿಮೆ ….! ಅಂತಿಮ ನಿರ್ಧಾರ ಏನೇ ಇದ್ದರು , ಸಾಮರಸ್ಯ ಕಾದುಕೊಳ್ಳಲಾದರು ನನ್ನೊಂದಿಗೆ ಚರ್ಚಿಸಬಹುದಿತ್ತು…. ಅವನ ಪ್ರಕಾರ ನಾನು ವ್ಯವಹಾರದಲ್ಲಿ ದಡ್ಡಿ .. ಅದು ಸರಿ ಎಂದು ಸುಮ್ಮನಾಗಿದ್ದೆ .ಎಲ್ಲ ನಿರ್ಧಾರವನ್ನು ಅವನಿಗೆ ಬಿಟ್ಟುಬಿಟ್ಟಿದ್ದೆ.
ಬಹುಶ ಹೆಣ್ಣುಮಕ್ಕಳು ಅಂಕೆಯಲ್ಲಿದ್ದರೆ ಎಲ್ಲಾ ಸಲೀಸಾಗಿ ಕುದುರಿಸಿಕೊಳ್ಳಬಹುದು ಎನ್ನುವುದು ತರ್ಕವಾಗಿತ್ತು.ಅಂಕೆಗೆ ತಂದುಕೊಳ್ಳಲು ಹಲವಾರು ಸೂತ್ರಗಳಿದ್ದವು ಅಲ್ಲಿ .
ನಿರಂತರ ಸಂಘರ್ಷದಲ್ಲಿರುವಂತೆ ಸದಾ ರಣೋತ್ಸಾಹಿಯಾಗಿರುತ್ತಿದ್ದ .ಕಲಹಕ್ಕೊಂದು ಕಾರಣವನ್ನು ಹುಡುಕುವುದರಲ್ಲೇ ಉತ್ಸುಕನಾಗಿರುತ್ತಿದ್ದ.ಆಗಾಗ ಕಿತಾಪತಿ ಮಾಡುವುದು ,ಮುನಿಯುವುದು ,ಮುಖತಿರುಗಿಸುವುದು ಕರಗತ ಮಾಡಿಕೊಂಡಿದ್ದ.ನಾನು ವಂಚಿಸಲ್ಪಡುತ್ತಿದ್ದೇನೆ ಎನ್ನುವ ಅಸಹನೆಯಲ್ಲಿ ಭೀಕರವಾಗಿ ಸ್ಪೊಟಿಸುತ್ತ ,ಎಲ್ಲಾ ತಪು ನಡವಳಿಕೆಗಳನ್ನು ‘ವಂಚಿಸಲ್ಪಟ್ಟಿದ್ದೇನೆ’ ಎನ್ನುವ ನೆಪವನ್ನು ಮುಂದಿಟ್ಟುಕೊಂಡು ಮುಚ್ಚಿ ಹಾಕಿ ಸಮರ್ಥಿಸುತ್ತಿದ್ದ .ಆನಂತರ ಗಾಯವನ್ನು ಮುಚ್ಚಿ ಕೊಳ್ಳಲು ,ತಪ್ಪಿಗೆ ತೇಪೆ ಹಾಕಲು ಮೇಲರಿಮೆಯನ್ನು ಬೆಳೆಸಿಕೊಂಡಿದ್ದ .ನಾನೇ ಸರಿ ಎನ್ನುವ ಧಾರ್ಷ್ಯ ತೋರಿಸಿಕೊಂಡು ,ತಮ್ಮವರನ್ನು ಬಿಟ್ಟು ಉಳಿದವರ್ಯಾರು ಸರಿ ಇಲ್ಲ ಎಂದು ದೂರುತ್ತಾ ಗೊಣಗುತ್ತ ಘಮಂಡಿತನವನ್ನು ಪ್ರದರ್ಶಿಸುತ್ತಿದ್ದ.
ನನ್ನ ಮೇಲೆ ತಪ್ಪುಗಳ ಹೊರೆಹೊರಿಸಿ ,ಕಡೆಗಣಿಸಿ ,ಕೀಳಾಗಿ ನಡೆದುಕೊಂಡು ,ಅಸ್ತಿತ್ವವೇ ಇಲ್ಲವೇನೋ ,ಮೂರು ಕಾಸಿಗೆ ಬೆಲೆ ಇಲ್ಲವೇನೋ ಅನ್ನುವಂತೆ ಒರಟಾಗಿ ಬೈಯುತ್ತ ನಡೆಸಿಕೊಳ್ಳುತ್ತಿದ್ದ…
ಎಷ್ಟು ಸುಲಭವಿತ್ತು ಅವನಿಗೆ ನನ್ನ ಮನಸನ್ನು ಘಾಸಿಗೊಳಿಸುವುದು , ಜೀವನ ಪ್ರೀತಿಯನ್ನು ಕಸಿದುಕೊಳ್ಳುವುದು , ಮನಸನ್ನು ಹೊಸಕಿ ಹಾಕಿ ಮುದುಡಿಸುವುದು…
ನೀನೆ ಎಲ್ಲದಕ್ಕೂ ಕಾರಣ, ನೀನೆ ಅರ್ಥ ಮಾಡಿಕೊಂಡು , ನೀನೆ ಹೊಂದಿಕೊಂಡು ಹೋಗಬೇಕೆನ್ನುವ ಹೊರೆ, ವ್ಯಂಗ್ಯ !!!
ರಂಪಗಳಿಗೆ ಹೆದರಿ ಸುಮ್ಮನಿದ್ದು ಬಿಡಬೇಕು ಅಥವಾ ಅವನ್ನನ್ನು ಸಂತೋಷ ಪಡೆಸುವ ಸಲುವಾಗಿ ಕೇಳುವುದ ಮೊದಲೇ ಅವನಿಗೆ ಸೌಕರ್ಯಗಳನ್ನೂ ಒದಗಿಸಿ ಬಿಡಬೇಕಿತ್ತು …..
ಅವನಿಗೊಂದಿಷ್ಟು ಹೇಳುವುದಿತ್ತು, ವ್ಯಕ್ತಿಗತ ಸಂಬಂಧಗಳಲ್ಲಿ ಪರಸ್ಪರರನ್ನು ಹಗುರವಾಗಿ ಪರಿಗಣಿಸುವುದರಿಂದ ಮತ್ತು ಒಬ್ಬರೊಬ್ಬರ ಸ್ವತ್ತು ಎಂದು ಕೊಳ್ಳುವುದರಿಂದ ಘರ್ಷಣೆಗಳು ನಡೆಯುತ್ತವೆ .ಸ್ವಲ್ಪವಾದರೂ ಸ್ಪೇಸ್ ಕೊಡಬೇಕು , ಎಲ್ಲವನು ಅನುಮತಿ ಪಡೆದುಮಾಡಬೇಕು, ತನಗೆ ತಿಳಿಸಿಯೇ ಮಾಡಬೇಕು ಎನ್ನುವ ಅತಿ curiosity ಹಕ್ಕು ಎನ್ನುವ ಹೆಸರಲ್ಲಿ ಚಲಾವಣೆಯಾದಾಗ ಕ್ರೌರ್ಯ ತಲೆದೋರುತ್ತವೆ.ತೀರ ಚಿಕ್ಕಪುಟ್ಟ ಅಸಮ್ಮತಿಗಳು ಅಸಹ್ಯವೆನಿಸುವ ಮಟ್ಟದ ವಾದ-ವಿವಾದಕ್ಕೆ ಕಾರಣವಾಗಿಬಿಡುತ್ತದೆ .ಹೃದಯಗಳು ಯುದ್ಧಕ್ಕೆ ನಿಲ್ಲುತ್ತವೆ .
ಸಂಗಾತಿಯನ್ನು ಅರಿಯಲು ಬಯಸದೆ , ತಾಳ್ಮೆಯನ್ನು ಇಟ್ಟುಕೊಳ್ಳದೆ ಒಂದು ವಸ್ತುವಿನಂತೆ ನೋಡುವುದು ಹಿಂಸೆಯಾಗುತ್ತದೆ …ಪರಸ್ಪರ ಸಹಾನುಬೂತಿ ಇಲ್ಲದೆ ,ಅನುಕಂಪ ಇಲ್ಲದೆ ಶಿಕ್ಷಿಸಲು ಮುಂದಾದರೆ, ಪ್ರೀತಿ ಜಾಗದಲ್ಲಿ ಭೀತಿ ಮೂಡುತ್ತದೆ .ಪರಿಹಾರಕ್ಕಾಗಿ ಪ್ರಯತ್ನಿಸಿದರೆ ಎಲ್ಲವು ತಿಳಿಯಾಗಿಬಿಡುತ್ತದೆ …………
ಸಮಸ್ಯೆ ಕೇವಲ ಅವನ ದೃಷ್ಟಿ, ನಡವಳಿಕೆಯನ್ನಷ್ಟೇ ಆಕ್ರಮಿಸಿರಲಿಲ್ಲ …
ಹೊಂದಾಣಿಕೆಯ ಸಮಸ್ಯೆ ಅಷ್ಟೇ ಆಗಿದ್ದಿದರೆ ಪೋಲಿಸ್ ವರೆಗೂ ಹೋಗುವ ಅಗತ್ಯವಿರುತ್ತಿರಲಿಲ್ಲ .. ಎಷ್ಟು ಸಂಸಾರಗಳು ಸಾಮರಸ್ಯ ಇಲ್ಲದೆ, ತೂಗಿಸುವ ಸಲುವಾಗಿ ಬದುಕುಳಿದಿಲ್ಲ… ಅವನೇನೇ ಆಗಿದ್ದರು ಸಾವರಿಸಿಕೊಂಡು ಹಾಗು ಹೀಗೂ ಮಾಡಿ ನಡೆಸಿಕೊಂಡು ಹೋಗುತ್ತಿದ್ದೆ … ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ, ಕಟ್ಟಿಕೊಂಡವರಿಗೆ ಮನಸನ್ನು ಎಷ್ಟೇ ಘಾಸಿಗೊಳಿಸಿದರು ಗಂಡ ಮುದ್ದು !ಬಹುಬೇಗ ರಾಜಿಗೆ ಸಿದ್ದವಾಗಿ ಬಿಡುತ್ತದೆ ಸಂಗಾತಿ ಮನಸು … ಹೆಂಡತಿಯಲ್ಲಿ ತಾಯ್ತನ ಮೂಡಿ ಹಟಮಾರಿ, ರಚ್ಚೆ ಮಗುವನ್ನು ಬಿಟ್ಟುಕೊಡಲಾಗದ ಬಂಧನವೇರ್ಪಟ್ಟು ಬಿಡುತ್ತದೆ ಗಂಡನಲ್ಲಿ …. ಏನೇ ಅಂದರು ಪರಿತಪ್ತ ಹೃದಯ ಮೆತ್ತಗಾಗಿ ಬಿಡುತ್ತದೆ , ಕ್ಷಮಿಸಿ ಬಿಡುತ್ತದೆ!!!
———————————————————————————————————————————————-
ಮತ್ತೆ ನಿಜ ಸಮಸ್ಯೆ ಏನು– ಸಾಮೂಹಿಕ ಅತ್ಯಾಚಾರ , emotional rape !!!!
ಅವನಿಗೆ ಯಾವೊಂದು ಸಣ್ಣ ಬಿನ್ನಾಭಿಪ್ರಾಯವನ್ನು ತಾನೊಬ್ಬನೇ handle ಮಾಡಿಕೊಳ್ಳುವಷ್ಟು ಸಾಮರ್ಥ್ಯವಿರಲಿಲ್ಲ…. ಅಷ್ಟು ಸೋಮಾರಿತನ ಅನ್ನುವುದಕ್ಕಿಂತ , ದರ್ಪ!
ಅಮ್ಮ, ಅಕ್ಕನಿಗೆ ಒಪ್ಪಿಸಿಬಿಟ್ಟರೆ ಅವರು ಹ್ಯಾಂಡಲ್ ಮಾಡಿಕೊಳ್ಳುತ್ತಾರೆ ….ನಾಲ್ಕು ಜನರೆದುರು ಮಾನ ತೆಗೆದರೇನೆ ಬುದ್ಧಿಬರುವುದು !!
ಹೆಂಡತಿ ತನ್ನ ಹಿಡಿತಕ್ಕೆ ಸಿಕ್ಕಿ ,ಅಂಕುಶಕ್ಕೊಳಪಡಬೇಕೆಂದರೆ , ಅವಳಿಗೆ ತಾನು ಕೀಳು ಎನಿಸಬೇಕು,… ಆ ಕೀಳರಿಮೆಯನ್ನು ಮನಸಲ್ಲಿ ಮೂಡಿಸಲು ತಾನು ಪತಿತೆ, ತಪ್ಪು ಮಾಡಿದ್ದೇನೆ ಎನಿಸುವಂತೆ ಮಾಡಬೇಕು .. ಜನರ ಬಾಯಿಂದ ಆ ರೀತಿ ಬರೆಸಿ ಧೃತಿಗೆಡಿಸಿದರೆ , ಅವಮಾನದ ಭಯಕ್ಕಾದರು ಬಗ್ಗುತ್ತಾಳೆ …
ಅತೀ ಸಣ್ಣದಕ್ಕೂ ಲಾವರಸ ಉಗುಳುವಂತೆ ವಾಚಾಮಗೊಚಾರ ಬೈದು , ಕೈಗೆ ಸಿಕ್ಕಿದನ್ನು ದ್ವಂಸ ಮಾಡಿ ,ತಪ ತಪ ಬಾಗಿಲು ಕಿಟಕಿಗಳನ್ನೂ ಬಡಿದಾಕಿ –ವ್ಯಗ್ರನಾಗಿ ಬಿಡುತ್ತಿದ್ದ .ಅವನಮ್ಮನನ್ನ್ನು ಸೇರಿಸಿಕೊಳ್ಳುತ್ತಿದ್ದ….ಬಹುತೇಕ ಸಮಯ ಕರೆಯುವ ಮುನ್ನವೇ , ಅವರಾಗೆ ತಲೆತೂರಿಸಿಕೊಂಡು ಬಂದೇ ಬರುತ್ತಿದ್ದರು ..
ಹೆಂಡತಿ ಎನ್ನುವ ಒಂದು ಸಣ್ಣ ಎಳೆಯ ದಾಕ್ಷಿನ್ಯವು ಇಲ್ಲದಂತೆ ನನ್ನನ್ನು ಪತಿತೆ ಮಾಡಿ ಬಿಡುತ್ತಿದ್ದ… ಕೆಲವೊಮ್ಮೆ ಮನೆಬಿಟ್ಟು ಹೋಗುವುದಾಗಿ, ನೇಣು ಹಾಕಿಕೊಂಡು ಸತ್ತುಹೋಗುವುದಾಗಿ ಹೆದರಿಸುತ್ತಿದ್ದ… ಎಲ್ಲವು ಎಲ್ಲರೆದುರು ನಡೆಯಬೇಕಿತ್ತು.. ಹೆಂಡತಿಯನ್ನು ನಿಭಾಯಿಸುವುದು ಬೇಕೇ ಇರಲಿಲ್ಲ ಅವನಿಗೆ…ಗಂಡ ಹೆಂಡತಿಯ ಮಧ್ಯೆ ಮುಚ್ಚುಮೊರೆ ಬೇಕಿರಲಿಲ್ಲ…ಎಲ್ಲವು ಖುಲ್ಲಂ ಖುಲ್ಲ! opensource ನಂತೆ , ಯಾರು ಬೇಕಾದರೂ ನೋಡಿಕೊಳ್ಳಬಹುದು, ಯಾರು ಬೇಕಾದರೂ ಬರಬಹುದು .
ನಂತರ ನನ್ನ ಅನಿಸಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ , ನನ್ನ ನಾದಿನಿಯನ್ನು ಬರಹೇಳುತ್ತಿದ್ದರು… ಅವಳೆದುರಿಗೆ ದೂರು , ಚಾಡಿ ಹರಡಿಕೊಳ್ಳುತ್ತಿದ್ದವು… ಎಷ್ಟು ಅವಮಾನ ಆಗುತ್ತಿತ್ತು !!
ಅವಳೋ ಮಾತಿನಲ್ಲೇ ಕಾಗೆಯನ್ನು ನಾಯಿ ಮಾಡಬಲ್ಲಳು , ನಾಯಿಯನ್ನು ಹಾವು ಮಾಡಬಲ್ಲಳು !!! ನನ್ನಿಂದಲೇ ತಪ್ಪಾಗಿದೆ ಎನ್ನುಂತೆ ತರ್ಕ ಮಾಡಿಬಿಡುತ್ತಿದ್ದಳು.
ಅಸಲಿಗೆ ಇವನ ಈ ವಿಚಿತ್ರ ವರ್ತನೆಗಳಿಗೆ ನಾನು ದೊಡ್ಡವರನ್ನು ಸೇರಿಸಿ ಬುದ್ದಿ ಹೇಳಿಸಬೇಕಿತ್ತು.. ಆದರೆ ಗಂಡನಿಗೆ ಹಾಗೆಲ್ಲ ಅವಮಾನ ಮಾಡೋಕೆ ಆಗೋದಿಲ್ಲ, ಆತ್ಮಗೌರವಕ್ಕೆ ಪೆಟ್ಟಾಗುತ್ತದೆ ಅವನಾಗೇ ಅರ್ಥ ಮಾಡಿಕೊಳ್ಳಬೇಕು, ಅಲ್ಲಿನವರೆಗೂ ಕಾಯುತ್ತೇನೆ ಎನ್ನುವಷ್ಟು ಸೂಕ್ಷ್ಮವಾಗಿ ಯೋಚಿಸುತ್ತಿದ್ದೆ…..ಆದರೆ ಅವನಿಗೆ ಮುಲಾಜೆ ಇರಲಿಲ್ಲ… ಕರುಣೆಯೂ ….
ನಂತರ ಮೂರು ಜನ ಸೇರಿಕೊಂಡು ನಮ್ಮ ಅಕ್ಕ ಭಾವ, ಚಿಕ್ಕಪ್ಪ, ಎಲ್ಲರನ್ನು ಕರೆಯುತ್ತಿದ್ದರು …. ನಾನು ಎಷ್ಟೇ ಬೇಡವೆಂದರೂ ಮೂರು ಜನಕ್ಕೆ ಯಾವ ತಡೆಯೂ ಇರುತ್ತಿರಲ್ಲಿಲ್ಲ …
ಬಂದವರೆದುರು ಅವರು ಮೂರು ಜನ, ನಾನು ಒಬ್ಬಳು…ಏನೇನೋ ವಾಗ್ವಾದ, ಚಾಡಿ, ರುಜುವಾತು!! .. ನನ್ನದು ದಯನೀಯ ಪರಿಸ್ತಿತಿ ನನ್ನನ್ನು ನಾನು ವಹಿಸಿಕೊಂಡು ಸರಿ ಎಂದು ನಿರೂಪಣೆ ಮಾಡಬೇಕಿತ್ತು…
ಈ ರೀತಿ ಕೆಸರೆರೆಚಾಟದಿಂದ ಏನು ಪ್ರಯೋಜನ… ಏನು ಫಲಿತಾಂಶ ನನಗಂತೂ ಅರ್ಥವಾಗುತ್ತಿರಲಿಲ್ಲ ….
ಅವಮಾನ ಮಾಡಿ , ಭಾವನಾತ್ಮಕವಾಗಿ ಇಲ್ಲವಾಗಿಸೋದು, ಮುಗಿಸುವುದು … ಹರ್ಟ್ ಆಗುವಂತ ಸೂಕ್ಷ್ಮ ವಿಷಯಗಳಿಗೆ ವಿಪರೀತ ಹರ್ಟ್ ಮಾಡುವುದು…!ಸ್ವಂತ ಗಂಡನೇ ಬಟ್ಟೆ ಕಳಚಿ ಎಲ್ಲರೆದುರು ನಿಲ್ಲಿಸಿದಂತ ಅನುಭವ….
ಶತ್ರುವಿನ ತರಹ ದೂರುತ್ತಿದ್ದ.. ಎಂತ ಕಟ್ಟೊರತೆಯಿರುತ್ತಿತ್ತು !…ಚಾಡಿ ಹೇಳುವಾಗ ಒಂದಿನಿತಾದರೂ ಹೆಂಡತಿ ಎನ್ನುವ ಭಾವನೆ ಇರುತ್ತಿರಲಿಲ್ಲವ? ನನನ್ನು ಅತಿಯಾಗಿ ಘಾಸಿಗೊಳಿಸುತ್ತಿದ್ದದ್ದೆ ಅದು !!…
ಸಂಬಂಧಗಳು guarantee card ಗಳೊಂದಿಗೆ ಬರುವುದಿಲ್ಲ.ನಂಬಿಕೆ ವಿಶ್ವಾಸಗಳನ್ನು ಇಡದೆ, ಗಳಿಸಿಕೊಳ್ಳದೆ ನೆಮ್ಮದಿಯಿಂದ ಅರೆ ಕ್ಷಣವೂ ಬದುಕಲು ಸಾಧ್ಯವಿಲ್ಲ ..
ತನ್ನ ಸ್ವತ್ತು ಎನ್ನುವಷ್ಟು possessiveness ಇದ್ದವ, ಏರುಪೇರುಗಳನ್ನೂ ಸ್ವತ್ತು ಎಂದು ಪರಿಗಣಿಸುತ್ತಿರಲಿಲ್ಲವೇಕೆ ?
ಸಾವಿರ ಬಾರಿ ಹೇಳಿದ್ದೆ- ನನ್ನದ್ದು, ನಿನ್ನದು ಏನೇ ವ್ಯಾಜ್ಯ ಕಡತಗಳಿದ್ದರು ದಯವಿಟ್ಟು ನಾಲ್ಕು ಗೋಡೆಗಳ ಮದ್ಯದಲ್ಲಿ ಇಟ್ಟುಕೋ .ತೃಷೆ ತೀರದಿದ್ದರೆ ಒಡಿ, ಬಡಿ, ಆಡು ,ಅನ್ನು ಎಷ್ಟೇ ಆದರು ನಾನು ನೀನು ಗಂಡ-ಹೆಂಡತಿ !!ಇನ್ನೊಬ್ಬರ ಎದುರು ದೂರು ಒಯ್ಯಬೇಡ …ನಿನ್ನ ಪ್ರಶ್ನೆಗಳೇನು , ನಿನ್ನ ದುಗುಡ,ದುಮ್ಮಾನ,ಅನುಮಾನಗಳೇನು ಮನಸ್ಸು ಬಿಚ್ಚಿಮಾತನಾಡು..ಬಗೆಹರಿಸಲು ಶಕ್ತಿಮೀರಿ ಪ್ರಯತ್ನಪಡುತ್ತೇನೆ …. ..
ಹಾಗೆ ಎಂದಿಗೂ ನಾನು ಮಾಡಲಾಗದಿದ್ದ ನಿವೇದನೆಗಳಿದ್ದವು— ಹೆಂಡತಿಗೂ ಮಾತನಾಡಲು ಅವಕಾಶ ನೀಡು..ಬರಿ ಜೇನುಸುರಿದಂತೆ, ಹೂ ಅರಳಿದಂತೆ , ಮಳೆಹೂಯ್ವಂತೆ ಮಾತಾಡುತ್ತ ನಿನ್ನನ್ನು ಖುಷಿ ಪಡಿಸಬೇಕು ಎನ್ನಬೇಡ. ನಾನು ಮನುಷ್ಯಳು …ನೀ ನೀಡುವ ರೋದನೆಗಳಿಗೆ ಮನಸ್ಸು ರೋದಿಸುತ್ತದೆ .ಹೇಳಿಕೊಳ್ಳಬೇಕು , ನಿಲ್ಲಿಸು ಎನ್ನಬೇಕು …ಸ್ವಲ್ಪ ಸ್ವಾತಂತ್ರ್ಯನೀಡು , ಚಿಟ್ಟೆಯಂತ ಮನಸ್ಸು, ಹಿಸುಕಿದರೆ ಹಸುನೀಗಿ ಬಿಡುತ್ತದೆ …..!
ಪ್ರೀತಿ ಸ್ನೇಹ ಎನ್ನುವುದು ಎಂತಹ ಗಟ್ಟಿ ಹೃದಯವನ್ನು ಮೆದುಗೊಳಿಸುತ್ತದೆ,ಸಂಗಾತಿಗಳ ಮಧ್ಯೆ ಇರಬೇಕಾದ್ದದ್ದೆ ಅದು !ಪ್ರೀತಿ ಹುಟ್ಟಲು ಬಿಡಬೇಕು, ಬೆಳೆಯಲು ಬಿಡಬೇಕು ,ಅರಳಲು ಸಹಕರಿಸಬೇಕು ..ಕಡೇಪಕ್ಷ ಚಿವುಟಬಾರದು.ಏನನ್ನು ಮಾಡದೆ ತಾಳ್ಮೆಯಿಂದ ಸುಮ್ಮನಿದ್ದು ಬಿಟ್ಟರು ಕಾಲಾಯ ತಸ್ಮಯ್ ನಮಃ ಎನ್ನುವಂತೆ ಸಮಯ ಎಲ್ಲವನ್ನು ಸೃಷ್ಟಿಸುತ್ತದೆ !! ಯಾಕಷ್ಟು ಬಳಸುದಾರಿ? ಪ್ರೀತಿಯಿಂದೊಮ್ಮೆ ಮಾತಾಡಿಸಿ, ಬೆಚ್ಚ್ಚಗಾಗಿಸು, ನಿನ್ನ ಪಾದಗಳ ಮೇಲೆ ಬೆಚ್ಚಗೆ ಮಲಗಿಬಿಡುತ್ತೇನೆ … ನನ್ನದೆಲ್ಲ ನಿನ್ನದೇ ಎಂದಾದ ಮೇಲೆ, sense of control ಯಾಕೆಬೇಕು? … ಹೆದರಿಸಿ ಬೆದರಿಸಿ ಯಜಮಾನನಾಗುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ !! ಮನಸು ನರಳಬಾರದು, ಅರಳಬೇಕು ..
ಎಲ್ಲವೂ ನನ್ನ ಹುಚ್ಚು ಭಾವುಕತೆಯ ಪ್ರಲಾಪನೆಗಳು ಎನ್ನುವಂತೆ ಅವನ ಹತ್ತಿರ ಇವೆಲ್ಲವೂ ಅರ್ಥಹೀನ !!!
ಅವನಿಗೆ ಅರ್ಥವಾಗುವುದೆಲ್ಲ ಒಂದೇ, ನಾಲ್ಕು ಜನರೆದುರು ಮಾನಹರಾಜು ಕೂಗಿದರೆ ಅಂಕುಶ ನಿರ್ಮಾಣವಾಗಿಬಿಡುತ್ತದೆ…ಅವನ ಮನಸಿನ ವಿಷರಾಚುತ್ತಿದ್ದದೆ ನ್ಯಾಯ ಪಂಚಾಯ್ತಿಗಳಲ್ಲಿ!
ಮದುವೆ ಮಾಡಿಕೊಟ್ಟವರಿಗೆ, ಹೆಣ್ಣುಮಗಳನ್ನು ಬಾಳಿಸಲು, ಕರೆದಾಗ ಬರಲು ಆಗದ್ದಿದ್ದರೆ , ಯಾಕೆ ಬಂದರು ಮುಂದೆ … ದಬ್ಬಾಳಿಕೆ ಬೇರೆ!
ಅಪ್ಪ ಇಲ್ಲದ ಹುಡುಗಿಯ ಮದುವೆ ನೆಂಟರ ದಾಕ್ಷಿಣ್ಯದಲ್ಲಿ ನೆರವೇರಿದ್ದಾಗಿತ್ತು!!! ಈಗ ಸಂಸಾರ ನಡೆಸಲು ಅವರು ತಲೆ ಕೊಡಬೇಕ್ಕಿತ್ತು !!!
ನ್ಯಾಯ ಪಂಚಾಯ್ತಿಯೂ ನಡೆದೇ ಹೋಗುತ್ತಿತ್ತು, ಯಾರು ಬಂದರು ಬರದೆ ಹೋದರು! …
ಅವನಕ್ಕನಿಗೆ ಹೇಳುತ್ತಿದ್ದೆ –ನೀನು ಮಧ್ಯೆಬರುವ ಅಗತ್ಯವಿಲ್ಲಾ !
—‘ಮದುವೆಗೆ ಓಡಾಡಿದ್ದು ನಾನು, ನನಗೆ ಹಕ್ಕಿದೆ ! ‘
ಹೋಗಲಿ ಅವನಿಗೆ ಬುದ್ಧಿ ಹೇಳು ..
—‘ನನ್ನ ತಮ್ಮ ಗಂಡಸು ,ಅವನಿಗೆ ಬುದ್ದಿ ಹೇಳೋಕೆ ನನ್ನಿಂದ ಸಾಧ್ಯವಿಲ್ಲ ….
ಮತ್ತೆ ಯಾಕೆ ಬರಬೇಕು
–‘ಬುದ್ದಿ ಹೇಳೋಕೆ .ಕೆಟ್ಟು ತವರು ಮನೆ ಸೇರಿ ಹೆಣ್ಣು ಮಕ್ಕಳು ತಂದೆ ತಾಯಿಗೆ ಕೆಟ್ಟ ಹೆಸರು ತರಬಾರದು .ಬಯ್ಯುತ್ತಾನ ಸುಮ್ಮನೆ ಬಯ್ಯಿಸಿಕೊಂಡುಬಿಡು.ಅನುಮಾನ ಪಡುತ್ತಾನ , ಸಹಿಸಿಕೋ … ನಾನು ಹೇಳುವುದು ಒಂದೇ ,ಗಂಡ ಏನೇ ನಿರೀಕ್ಷಿದರು ಈಡೇರಿಸಿಬಿಡು .ಗಂಡನನ್ನು ಅರ್ಥಮಾಡಿಕೊಂಡು ತೃಪ್ತಿ ಪಡಿಸಿದರೆ ಮಾತ್ರ ಮದುವೆ ನಿನ್ನನ್ನು ಬದುಕಿಸುತ್ತದೆ’
ಸಹಿಸಿಕೊಳ್ಳದೆ ಮತ್ತೇನು ಮಾಡುತ್ತಿದ್ದೀನೆ, ಯಾರಿಗಾದರು ಹೇಳಿಕಳಿಸಿ ,ದೂರು ಕೊಟ್ಟು , ಧಮಕಿ ಹಾಕಿಸಿದೆನ?
ಈಡೇರಿಸುವುದಕ್ಕೆ, ಕೊಡುವುದಕ್ಕೆ ಏನು ಬಾಕಿ ಇದೆ, ಎಲ್ಲ ಕೊಟ್ಟಿದ್ದೀನಲ್ಲ…..!!!
–‘ಏನೇ ಆದರು ಅವನು ಬಗ್ಗುವುದಿಲ್ಲ ,ಸೋಲ್ಲೋಪ್ಪುವುದಿಲ್ಲ,ತನ್ನದು ತಪ್ಪು ಅಂತ ಒಪ್ಪುವುದಿಲ್ಲ …ಮಹಾ ಗರ್ವಿಷ್ಟ ಅವನು….ಅವನು ಇರುವುದೇ ಹಾಗೆ …ನಾವೇನು ಮಾಡಲು ಆಗುವುದಿಲ್ಲಾ …!!!’
ನೀವೇನಾದರೂ ಮಾಡಿ ಅಂತ ನಿಮ್ಮ ಬಳಿ ನಾನು ಬಂದು ಕೇಳಿಕೊಂಡಿಲ್ಲವಲ್ಲ ?
ನಾನು ಅದೇ ಹೇಳುತ್ತಿರುವುದು ,ಗಂಡ ಹೆಂಡತಿ ಮದ್ಯೆ ತಾನಾಗೆ ಎಲ್ಲ ಸರಿಹೋಗಲು ಬಿಟ್ಟು ಬಿಡಿ.. ನಾ ಅತ್ತರು, ಮುನಿಸಿಕೊಂಡರು ,ಕೊಪಿಸಿಕೊಂಡರು ಅವನೇ ಹ್ಯಾಂಡಲ್ ಮಾಡಬೇಕು …
ಸುಖ ಪಡೆಯುವುದಕ್ಕೆ ಅವನು , ಜಗಳ ತೆಗೆಯುವುದಕ್ಕೆ ಅವನು, ಬಂದು ಜಗಳ ಶಮನಗೊಳಿಸಿ ಇವನ ಸಂಸಾರದ ತಂತಿ ಬಿಗಿ ಮಾಡಿಕೊಟ್ಟು ಹೋಗೋಕೆ ನನ್ನ ನೆಂಟರು , ನೀವು ಎಲ್ಲ ಯಾಕೆ ಬರಬೇಕು…ತಾಳಿ ಕಟ್ಟಿದ ಮೇಲೆ ಸರಿಯೋ, ಬೆಸಯೋ ಅವನ ಹೊಣೆ ಅದು …ಹೀಗೆಲ್ಲ ಬಂದು ಪರವಹಿಸಬೇಡಿ…
–‘ಇಲ್ಲ ಅವನು ನನ್ನ ತಮ್ಮ, ಕರೆದಾಗ ಬರದೆ ಇರಲಾಗುವುದಿಲ್ಲ … ಏನೇ ಆದರು ಅವನ್ನನ್ನು ನಾನು ಬಿಟ್ಟು ಕೊಡುವುದಿಲ್ಲ ‘
ಸರಿ , ಅವನನ್ನನ್ನು ಬಿಟ್ಟುಕೊಡದ್ದಿದ್ದರೆ ಚಿಂತೆ ಇಲ್ಲ, ಆದರೆ ಅವನನ್ನನು ಎತ್ತಲು ಹೋಗಿ , ನನ್ನನ್ನು ಯಾಕೆ ತುಳಿಯುತ್ತೀರ.. ನನ್ನ ಖಾಸಗಿ ವಿಷಯವನ್ನು ಬಹಿರಂಗವಾಗಿ ಮಾತಾಡಲು ನಿಮಗೆ ಅನುಮತಿ ಇಲ್ಲ …ಪ್ರವೇಶ ನಿಷೇದಿಸಿದೆ!!!
ಅಷ್ಟೆಲ್ಲ ಕಟ್ಟುಕೊಂಡು ಅವಳಿಗೆ ಏನು ಆಗಬೇಕಿರಲಿಲ್ಲ… ತಮ್ಮನ ಮನಸಿನ ಪ್ರಕಾರ ನಡೆದು, ಅವನಿಗೆ ಇಂಬು ಕೊಟ್ಟು, ಗೆಲ್ಲಿಸುವುದು ಮತ್ತು ಸಹಾಯ ಮಾಡಿದ ಹಾಗೆಮಾಡಿ , ಅವನಿಂದ ಆಗಬೇಕಿದ್ದ ಸಹಾಯ ಪಡೆಯುವುದು ಅಷ್ಟೇ ಅವಳಿಗೆ ಬೇಕಿದ್ದಿದ್ದು ..ನನ್ನ ಸುಖ, ಸಂಸಾರ,ನೆಮ್ಮದಿ ಅವಳಿಗೆ ಮುಖ್ಯ ಆಗಿರಲಿಲ್ಲ …
ಆದರೆ ಮಾತು ಕಲಿತ್ತಿದ್ದಳು …ಬಹಳ ಚೆನ್ನಾಗಿ !!!
ಎಲ್ಲ ಸೇರಿದ್ದಾಗ ಅಳಲು ಶುರು ಮಾಡಿಬಿಡುತ್ತಿದ್ದಳು —‘ ನಮ್ಮಮ್ಮ ಮನೆ ಮನೆ ಅಂತ ಸಾಯುತ್ತಾರೆ..ಸೊಸೆ ಅಂತ ಎಲ್ಲ ಮಾಡಿಕೊಡುತ್ತಾರೆ …ಎಲ್ಲಾ ಇದ್ದು ಸಂಸಾರ ಮಾಡದೇ ಹೀಗೆಲ್ಲ ಮಾಡುತ್ತಾಳೆ…ಇವಳಮ್ಮ ಸರಿ ಇಲ್ಲ, ಹಣ್ಣುಮಗಳಿಗೆ ಸಂಸಾರ ಮಾಡು ಎಂದು ಬುದ್ದಿ ಹೇಳುವುದಬಿಟ್ಟು, ಪರವಹಿಸುತ್ತಾರೆ…ಅವನು ಹೆಂಡತಿಯನ್ನು ಎಷ್ಟೆಲ್ಲಾ ಪ್ರೀತಿಸುತ್ತಾನೆ ……ನಾವೆಲ್ಲಾ ಪೂಜೆ ದೇವರು ಅಂತೀವಿ, ಪೂಜೆ ಮಾಡಲ್ಲ, ಮನೆ ಕೆಲಸ ಮಾಡಲ್ಲ ,ಒಬ್ಬನೇ ಮಗ ಅಂತ ಮುದ್ದಾಗಿ ಸಾಕಿದ್ದೇವೆ , ಎದ್ದು ಹೋಗಿ ಕೈ ತೊಳಿ ಅನ್ನುತ್ತಾಳೆ, ತಟ್ಟೆಗೆ ತೊಳಿಸಲ್ಲ!! ಗಂಡಸು ಅವನು ಮರ್ಯಾದೆ ಕೊಡಲ್ಲ. ..ಅವನು ಹೇಳಿದಂಗೆ ನಡೆದುಕೊಳ್ಳ ಲಿಲ್ಲ್ಲ..ಎಂತ ಗಂಡಸಾದರು ಕುಪಿತಗೊಳ್ಳುತ್ತಾನೆ …ಸೇರಿದ ಮನೆ ಪ್ರಕಾರ ಹೊಂದಿಕೊಳ್ಳಬೇಕು ..ಒಂದು ಮೊಗು ಆದರೆ ಸರಿ ಹೋಗುತ್ತೆ ‘
ಜನರನ್ನೆಲ್ಲ ನಂಬಿಸಿಬಿಡುತಿದ್ದಳು .
ಆದರು ಎಷ್ಟು ಬಾರಿ ಹೇಳಿದ್ದೆ, ‘ನಿನ್ನ ಮನೆಗಾಗಲಿ, ಸಂಸಾರಕ್ಕಾಗಲಿ ನಾನು ಯಾವತ್ತಾದರೂ ಮೂಗು ತೋರಿಸಿ ಬಂದಿದ್ದೀನ? …ನಿನ್ನ ಮಕ್ಕಳಿಗೆ ಗದರಿಸಿದ್ದೀನ?…ನೀನು ಬಂದರೆ ನನಗೆ ಹಿಂಸೆಯಾಗುತ್ತದೆ ….ಇನ್ನೊಮ್ಮೆ ನೀನು ಬಂದರೆ ನಾನು ಪೋಲಿಸ್ ವರೆಗೂ ಹೋಗಬೇಕಾಗುತ್ತದೆ ….’
ಯಾವುದೇ ಲಗಾಮು ಇರಲಿಲ್ಲ, ಎಷ್ಟು ಸಾರಿ ಹೇಳಿದ ಮೇಲೂ ಬಂದೆ ಬರುತ್ತಿದ್ದಳು !!!ಅವನ ಶಕ್ತಿ ಅವನ ಅಕ್ಕ ! ಅವಳ ಹಸ್ತಕ್ಷೇಪವನ್ನು ನಾನು ವಿರೋದಿಸಿದರೆ, ಕೊಚ್ಚಿ ಪುಡಿಪುಡಿ ಮಾಡಲು ಹೇಸುತ್ತಿರಲಿಲ್ಲ…ಅವನಿಗೆ ಅವಳು, ಅವಳಿಗೆ ಅವನು ಕಾವಲು …
ಇನ್ನು ಅವನಮ್ಮ ದಿನಕ್ಕೆ ಏನಿಲ್ಲ ಅಂದರು 25 ಬಾರಿ ಹೆದರಿಸುತ್ತಿದ್ದರು, ಪ್ರತಿಯೊಂದರಲ್ಲೂ ..ಹೀಗೆ ಮಾಡು ಹಾಗೆ ಮಾಡು, ಇಲ್ಲಾಂದರೆ ಅವನು ಸುಮ್ಮನೆ ಬಿಡುವುದಿಲ್ಲ ,ಬೈದುಬಿಡುತ್ತಾನೆ!!!
ಎಲ್ಲದರಲ್ಲೂ ಅವರ ನಿರ್ದೇಶನ ನಡೆಯಬೇಕು…ಅದೇನು ಅಂತ ಕಷ್ಟದ್ದಾಗಿರಲಿಲ್ಲ..ನಡೆಯಲಿ ಅಂತಲೇ ಸುಮ್ಮನಾಗುತ್ತಿದ್ದೆ …
…ಚೆನ್ನಾಗಿದ್ದಾಗ ನನ್ನ ಹತ್ತಿರ ಅವನಬಗ್ಗೆ ‘ಕಿತಾಪತಿ ನನ್ನ ಮಗ, ಯಾರನ್ನು ನೆಮ್ಮದಿಯಾಗೆ ಇರೋಕೆ ಬಿಡಲ್ಲ ,ಯಾಕಿಂಗೆ ಆಡುತ್ತಾನೋ ‘ ಎನ್ನುತ್ತಿದ್ದವರು
ಅವನೆದುರು ‘ಹುಲಿ ಇದ್ದಂಗೆ ಇದ್ದ ನನ್ನ ಮಗ , ಹೀಗೆ ಮಾಡಿಬಿಟ್ಟಳು ‘ ಅಂತ ಅಳಲು ಶುರು ಮಾಡಿಬಿಡುತ್ತಿದ್ದರು .
ಗಂಡಸು ಹೆಂಗಸು ಒಂದೇ ಸಮ ಆಗಲು ಸಾಧ್ಯವಿದೆಯ ಎಂದು ಜನಕ್ಕೆ ಪ್ರಶ್ನೆ ಹಾಕುತ್ತಿದ್ದರು…ಜನ ಏನಾದರು, ಈಗಿನ ಕಾಲದಲ್ಲಿ ದಂಪತಿಗಳು ಸ್ನೇಹಿತರಂತೆ ಇರಬೇಕು ಅಂದರೆ,-‘ ಹೇಗೋ ಇಬ್ಬರು ಸಂತೋಷವಾಗಿದ್ದರೆ ಸಾಕು ನನಗೆ’ ಎಂದು ಬಿಡುತ್ತಿದ್ದರು .
‘ನೀನೇನಾದರು ತಪ್ಪು ಮಾಡಿದರೆ ನಿನ್ನ ತವರು ಮನೆಯವರನ್ನು ಕರೆಸುತ್ತೇನೆ , ಅವನು ತಪ್ಪು ಮಾಡಿದರೆ ನನ್ನ ಹತ್ತಿರ ಹೇಳು … ನಾವು ತಿರ್ಮಾನ ಮಾಡಿ ಶಿಕ್ಷೆ ಕೊಡುತ್ತೇವೆ ಎನ್ನುತ್ತಿದ್ದರು’.
ಅವನು ಹೀಗೆ ಮಾಡುವುದು ತಪ್ಪಲ್ಲವ ಅಂತ ಕೇಳಿದರೆ , ‘ನಾನು ಬೆಳೆಸಿದ ಮಗ ಅವನು, ನಾನು ಸರಿಯಾಗಿ ಬೆಳೆಸಿಲ್ವ, ಯಾವ ಲೋಫರ್ ನನ್ಮಗ ಹೇಳಿದ್ದು ‘ ಎಂದು ರಂಪ ಮಾಡಿಬಿಡುತ್ತಿದ್ದರು…
‘ಗಂಡಸರೊಂದಿಗೆ ಯಾಕೆ ಮಾತಾಡಬೇಕು , ತಲೆ ಬಗ್ಗಿಸಿ ಕೊಂಡುಹೋಗಿ, ಹೆಣ್ಣು ಮಕ್ಕಳೊಂದಿಗೆ ಮಾತ್ರ ಮಾತಾಡಿ ಕೆಲಸಮಾಡಿಕೊಂಡು ಬರಬೇಕು.ಹೆಣ್ಣುಮಕ್ಕಳು ರಾತ್ರಿ 9 ಆಗುವಷ್ಟರಲ್ಲಿ ಮನೆಗೆ ತಲುಪಬೇಕು .ಎಲ್ಲದಕ್ಕೂ ಅತ್ತೆಯ ಪರ್ಮಿಷನ್ ತೆಗೆದುಕೊಂಡು ಹೋಗಬೇಕು ….’ ಅವರ ಯೋಚನಾಲಹರಿ ಬದಲಾಗೋದಕ್ಕೆ ಸಾಧ್ಯವಿರಲಿಲ್ಲ .
‘ಸುಮ್ಮಸುಮ್ಮ್ಮನೆ ಅನುಮಾನ ಬೀಳುತ್ತಾನ ? ‘ ‘ಯಾರನ್ನು ಕೇಳಿ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಂಡಿದ್ದೀರ ?’ ‘ಪಾತ್ರೆ ಗುಡ್ಡೆ ಹಾಕಿ ತೊಳೆಯಮ್ಮ ಎನ್ನಬೇಕಿತ್ತು ನಾನು’ ಗಂಡನ ಬಟ್ಟೆ ಹೊಗೆಸಬೇಕಿತ್ತು ‘ ‘ಸುಮ್ಮನೆ ಅಡಿಗೆ ಮನೆಯಲ್ಲಿ ಸೌಟು ಆಡಿಸಿದರೆ ಅಡಿಗೆ ಮಾಡಿದಂಗ ?’ ‘ನಾನು 10 ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದು’ ——ಶುದ್ಧ ರುದ್ರಕಾಳಿ , ಭದ್ರಕಾಳಿ !!!!!!!!!!!
ಇನ್ನು ನನ್ನ ಗಂಡ ! ಎಲ್ಲರೆದುರು ಗಳಗಳನೆ ಅಳಲು ಶುರುಮಾಡಿಬಿಡುತ್ತಿದ್ದ…ತುಂಬಾ ನೊಂದುಬಿಟ್ಟಿದ್ದೀನಿ ನಾನು.. ಯಾವನೋ ಇವಳಿಗೆ ನನ್ನ ಬಗ್ಗೆ ಕೆಟ್ಟದಾಗಿ messageಕಳಿಸಿದ್ದ …ಓದಿರೋ ಹುಡುಗಿ ಬೇಡ ಬೇಡ ಎಂದರು ಕಟ್ಟಿ ಬಿಟ್ಟಿರಿ , ಬರಿ ಹೆಣ್ಣು ಮಕ್ಕಳಿರುವ ಮನೆ ಬೇಡಾ ಅಂದೇ .. ಈಗ ನೋಡಿ ನಾನು ಅನುಭವಿಸಬೇಕು… ನನಗು ನಮ್ಮಮನಿಗು ತಂದಿಟ್ಟುಬಿಟ್ಟಳು…ಕರದುಕೊಂಡು ಹೋಗಿಬಿಡಿ ನನಗೆ ಬೇಡ ….’ ಏನೇನೋ ….!!!!!
ಅವನನನ್ನು ಪ್ರಸನ್ನವಾಗಿ ಇಟ್ಟುಕೊಳ್ಳುವುದಕ್ಕೆ ಅವನ ಪರ ನಿಂತುಬಿಡುತ್ತಿದ್ದರು ಇಬ್ಬರು … ಅವರಿಬ್ಬರೂ ಪರವಾಗಿ ನಿಲ್ಲುವುದರಿಂದ ತನ್ನದೇನು ತಪ್ಪಿಲ್ಲ ಎಂದುಕೊಂಡು ಬಿಡುತ್ತಿದ್ದ ಅವನು ….
ಎಷ್ಟು ಅತ್ಯಾಚಾರ ಮಾಡುತ್ತಿದ್ದಾರೆ, ನನ್ನ ಒಳೆಯತನಕ್ಕೆ ಬೆಲೆಯಿಲ್ಲವ, ಅಕ್ರಮ ಸಂಬಂಧ ಇದೆ ಎಂದು ಜನರೆದುರು ಹೇಳುತ್ತಿದ್ದಾನೆ, ಯಾವ ಹೆಣ್ಣಿನ ಮೇಲೂ ಇಂತ ಆರೋಪ ಹೊರಿಸುವುದಕ್ಕೆ ಸಾವಿರಬಾರಿ ಯೋಚಿಸಬೇಕು, ಅಂತದ್ದರಲ್ಲಿ ಹೆಂಡತಿಯ ಮೇಲೆ ಹೀಗೆಲ್ಲ ಹೇಳುತ್ತಿದ್ದಾನೆ, ಜನರಿಗೆ ಯಾವ ಅರ್ಥ ಸಿಗುತ್ತದೆ …ಹಿಂಸೆಯಾಗಿ ಬಿಡುತ್ತಿತ್ತು. ಅಷ್ಟುದಿನ ಮೌನವಾಗಿ ಒತಿಟ್ಟುಕೊಂಡಿದ್ದ ಒತ್ತಡ , ಮಾತುಗಳು ಸ್ಪೋಟಗೊಳ್ಳುತ್ತಿದವು …
ನೋಡಿ ನೋಡಿ ನಿಮ್ಮೆದುರೆ ಹೇಗೆ ಗಂಡನನ್ನು ಅಗೌರವಿಸುತ್ತಿದ್ದಾಳೆ, ನಾನೆಷ್ಟು ನಿತ್ಯ ಅನುಭವಿಸಬಹುದು ಲೆಕ್ಕ ಹಾಕಿ !!!!
ಹಾಗು ಹೀಗೂ ಅವರಕ್ಕ ಪರಿಸ್ತಿತಿ ತಣ್ಣಗೆ ಮಾಡಿ happy ending ಅನ್ನಿಸುತ್ತಿದಳು.ಎಲ್ಲಾ ಸರಿ ಹೋಯ್ತು ಇನ್ನು ಮುಂದೆ ಹ್ಯಾಪಿ ಲಿವಿಂಗ್ ಎನ್ನಿಸುತ್ತಿದಳು ….
ಇನ್ನ್ನೊಮ್ಮೆ ಪಂಚಾಯ್ತಿ ಕರೆಸಿದರೆ ನಾನು ಸುಮ್ಮನಿರಲ್ಲ, ಇನ್ಯಾವತ್ತು ಅದು ನಡೆಯಬಾರದು ಎಂದು ಅದೆಷ್ಟನೆ ಬಾರಿಗೆ ಹೇಳಿದ್ದೀನೋ..!!!!
ಇನ್ನೊಂದು 20 ದಿನ ಅಷ್ಟೇ!!! ಅಲ್ಲಿಗೆ ನಿಲ್ಲುತಿರಲಿಲ್ಲ..ಮತ್ಯಾವುದೋ ನೆಪಕ್ಕೆ ಅದೇ ರಗಳೆ, ಅದೇ ಪಂಚಾಯ್ತಿ !!!!ಎಂತೆಂತ ಕ್ಷುಲಕ ವಿಷಯಗಳು ಪೌಡರ್ ಡಬ್ಬ ಸ್ಥಳ ಬದಲಾಯಿಸಿದಳು, ಜೊತೆಗೆ ಶಾಪಿಂಗ್ ಮಾಡಲಿಲ್ಲ, ಅಮ್ಮನ ಮನೆಗೆ ಹೋಗಬೇಕೆಂದಳು, ಮುನಿಸಿಕೊಂಡಳು , ನನಗೆ ಮೆಸೇಜ್ ಕಳಿಸಿದಳು …..ಎಲ್ಲ ಹೆಂಡತಿಯರು ಮಾಡುವಂತದ್ದೆ, ಆದರೆ ಇವನೊಬ್ಬ ಮಾತ್ರ ಅವಕೆಲ್ಲ ಜನ ಸೇರಿಸಿಕೊಂಡು ಪಂಚಾಯ್ತಿ ಮಾಡುತ್ತಿದ್ದ !!!ನಡೆದ ವಿಷಯಕ್ಕೂ ,ಪಂಚಾಯ್ತಿಗೆ ನೆರೆದ ಕಾರಣಕ್ಕೂ ಸಂಬಂಧವೇ ಇರುತ್ತಿರಲಿಲ್ಲ … ಏನೇ ಆಗಿದ್ದರು ಪ್ರತಿ ಪಂಚಾಯ್ತಿಯಲ್ಲೂ ಅದೇ ‘ಯಾವನೋ ಗಂಡಸು … messagu …ಕಾಲ್ detailu …ಕವನ …’ ಅದದೇ ಅಪಾದನೆ !!!! ನಾನು ನೋಯುತ್ತಿದ್ದದ್ದು , hurt ಆಗುತ್ತಿದ್ದದ್ದು ಆ ವಿಷಯಕ್ಕೆ ಅಂತ ತಿಳಿದಮೇಲೆ ಅದೇ ಒಂದು trump card ಆಗಿಬಿಟ್ಟಿತ್ತು ……
11 ತಿಂಗಳಲ್ಲಿ 15 ಪಂಚಾಯ್ತಿಗಳು !!! ಬಹುಶ ಈ ರೀತಿ ಸಂಸಾರ ಮಾಡಿಸುವುದನ್ನು ನಾವ್ಯಾರು ಕೇಳೂ ಇರಲಿಲ್ಲ ನೋಡೂ ಇರಲಿಲ್ಲ ..
ಅವರ ಚಿಕ್ಕಪ್ಪನನ್ನು ಕರೆಸಿ ಪಂಚಾಯ್ತಿ ಮಾಡಿಸಿದಾಗಲೇ ನನಗೆ ಸಹಿಸಿಕೊಳ್ಳಲಾಗದ ಹಿಂಸೆಯಾಗಿದ್ದು …
ಯಾವನೋ ಮೆಸೇಜ್ ಮಾಡಿದ್ದ ಅಂತ ಇವನೆಂದರೆ, ಭೋಳಿ ಮಗನೆ ಅವತ್ತೇ ಯಾಕೆ ಹೇಳಲಿಲ್ಲವೋ ಅಂತ ಅವರು….
ಇನ್ಯಾವನೋ ಇದ್ದ ಇವಳ ಜೀವನದಲ್ಲಿ , ಮನೆಗೆ ಒಂದು ದಿನ ತರಕಾರಿ ತಂದಿಲ್ಲ, ಹಬ್ಬಕ್ಕೆ ಇವರಮ್ಮ ಕರೆಯಲಿಲ್ಲ , ಭಾವ ರಾತ್ರಿ 11 ಕ್ಕೆ ಫೋನ್ ಮಾಡಿ ಇವಳು ಒಬ್ಬಳನ್ನೇ ಕರೆಸಿಕೊಂಡ, ಗಾಡಿ ತರಲು ಯಾಕೆ ಅವಳ ಭಾವನ ಪರ್ಮಿಷನ್ ಕೇಳುತ್ತಾಳೆ ,ಮನೆ ಯಾಕೆ ಮದುವೆಯ ಸಮಯದಲ್ಲಿ ಖಾಲಿ ಮಾಡಿದ್ದು… ಏನೇನೋ ಅಸಹ್ಯ ಹುಟ್ಟಿಸುವ ಪ್ರಶ್ನೆಗಳು .. ಚರ್ಚೆಗಳು……
ಹುಡುಗಿ ಸರಿ ಇಲ್ಲ ಅನ್ನವವರೆಗೂ ಅವರು convince ಆದರು !!
ಅವತ್ತು ನನ್ನ ಮನೆಯವರ್ಯಾರು ಬಂದಿರಲಿಲ್ಲ..ನಾನೊಬ್ಬಳೆ.. ಅವರು 4 ಜನ…
ಜೊತೆಗೆ ನನ್ನ ಅಮ್ಮ,ಅಕ್ಕ,ಭಾವಂದಿರು ಯಾರು ಸರಿ ಇಲ್ಲ ಎನ್ನುವವರೆಗೂ ಅವರುಗಳ ಮಧ್ಯೆಯೇ ಡಿಸ್ಕಶನ್ ನಡೆಯಿತು ..ನನ್ನ ಮೇಲೆ ಸರಿ…. ಯಾಕೆ ಸಂಬಂಧವೇ ಇಲ್ಲದವರನ್ನು ಸೇರಿಸಿಕೊಂಡು ಅವಹೇಳನ ಮಾಡುತ್ತಿದ್ದಾರೆ…..
ಒಂದಷ್ಟು ಟಿಪ್ಸ್ ಕೂಡಕೊಟ್ಟರು ಅವರು ,’ಕೆಲಸಕ್ಕೆ ಕಳಿಸಬೇಡ , ತವರು ಮನೆಗೆ ಅವಾಗವಾಗ ಕಳಿಸಬೇಡ, ಅವರೇ ಹೇಳಿಕೊಡುವುದು ,ಮಲಗಿಕೊಂಡುಬಿಡು, ಅವಳೇ ಎದ್ದು ಕೆಲಸ ಎಲ್ಲ ಮಾಡಿ ಗಂಡನನ್ನು ಕೆಲಸಕ್ಕೆ ಕಳಿಸಲಿ, ಹೆಣ್ಣುಮಕ್ಕಳನ್ನು ಅಳೋಕೆ ಅಗಲ್ವೇನೋ ನಿನಗೆ……’
ನನ್ನ ಚಿಕ್ಕಪ್ಪ, ಭಾವನಿಗೆ ಫೋನ್ ಮಾಡಿ –‘ಯಾರೋ ಹುಡುಗ message ಕಳಿಸಿದ್ದನಂತೆ ,ಅವತ್ತೇ ನಾವು ಕೇಳಬೇಕಿತ್ತು ನಿಮ್ಮನ್ನು , ಈ ನನ್ನ ಮಗ ಹೇಳಲಿಲ್ಲ ನಮಗೆ ‘
ಎಂತ ಕ್ಷುಲ್ಲಕ ವಿಷಯಗಳು —- ಕೆಲಸಕ್ಕೆ ಬರದ ಮೆಸೇಜ್ , ಕಲೀಗ್ ಜೊತೆ ಮಾತನಾಡದೆ ಕೆಲಸಮಾಡಬೇಕು,ಹಂಗೇನಾದರು ಇದ್ದರೆ ಮನೆಗೆ ಬಂದು ಮಾತಾಡಬೇಕು .. — ಇಲ್ಲ ಅಂದರೆ ನನಗೆಅಕ್ರಮ ಸಂಬಂಧವಿದೆ !!! ಅದು ಒಬ್ಬನ ಜೊತೆ ಅಲ್ಲ , ಮದುವೆಗೆ ಮುಂಚೆ ಒಬ್ಬ ಹುಡುಗನ ಜೊತೆ, ಆಮೇಲೆ ಇನ್ನೊಬ್ಬನ ಜೊತೆ ,ನನ್ನ ಟೀಂ ನವರೆಲ್ಲರ ಜೊತೆ,ಯಾವ ಹುಡುಗನ್ನನ್ನು ಬಿಡದ ಲಾಚರೆ ನಾನು !!!!!!!!!!!!!!
ಎಷ್ಟು ದೂರ್ತನಂತೆ ಹೇಳುತ್ತಿದ್ದ ‘ ನಮ್ಮಮ್ಮ,ನಮ್ಮಕ್ಕ ಹೇಗೆ ಬೇಕಾದರೂ ಮಾತು , ಕತೆ ತಿರುಗುಸಿ ನೀಗಿಕೊಳ್ಳುತ್ತಾರೆ …ನಾನು ಒಂದು ಚೂರು ಕೊಸರಿದರೆ ,ನಮ್ಮಮ್ಮ ಅಕ್ಕ ಸುಮ್ಮನೆ ಬಿಡಲ್ಲ ನಿನ್ನ , ನನ್ನ ನೆಂಟರ್ಯಾರು ಸುಮ್ಮನೆ ಬಿಡಲ್ಲ ನಿನ್ನ, ನಿನ್ನ ತವರು ಮನೆಯವರೆದುರೆ ನಿನ್ನ scrap ಮಾಡಿಬಿಡುತ್ತೀನೆ, ನೀನು ಇಷ್ಟು ಮಾಡಿದರೆ ನಾವು ಅಷ್ಟು ಮಾಡುತ್ತೇವೆ , ಹೇಳುವುದನ್ನು ನೀನು ದೈನ್ಯವಾಗಿ ಹೇಳಿದರೆ ಮಾತ್ರ ನಾನು ಅರ್ಥ ಮಾಡಿಕೊಳ್ಳುತ್ತೇನೆ..ನನ್ನ ದಾರಿಗೆ ನೀನೆ ಬರಬೇಕು, ಬಗ್ಗೋ ಮಾತೇ ಇಲ್ಲ !!!! ‘ –ಎಂತೆಂತ ವಂಚನೆ , ರಾಜಕೀಯ , ಅನೀತಿ …
ಕಡೆವರೆಗೂ ಹೇಳಿದ್ದು,ಕೇಳಿಕೊಂಡಿದ್ದು ಒಂದೇ ನಾನು, ಏನೇ ಆದರು ನೀನೊಬ್ಬನೇ ನಿಭಾಯಿಸು , ನಿಯಂತ್ರಿಸು !!!!!
… ಕುಸಿದುಹೋದೆ ಪಾತಾಳಕ್ಕೆ …depression ಶುರುವಾಗಿದ್ದೆ ಈ ಸಲುವಾಗಿ …tablets ತೆಗೆದುಕೊಳ್ಳದೆ ಸಂಭಾಳಿಸಿಕೊಳ್ಳದಾದೆ . ಮಾತ್ರೆಯದ್ದು ಎಂತ side effects , ಹೊಟ್ಟೆಯಲ್ಲ ಉರಿ ಉರಿ!!! ಜೀವನ ಪ್ರೀತಿ ಇರಲಿ, ಮಾಡುವ ಕೆಲಸದಲ್ಲೂ ಆಸಕ್ತಿವಹಿಸಲಾಗುತ್ತಿರಲಿಲ್ಲ , performance ಕಣ್ಣ ಮುಂದೆಯೇ ಕುಸಿಯುತ್ತಿತ್ತು , migrane ಸಮಸ್ಯೆ ಹೆಚ್ಚಾಯಿತು…. ಅವನ ಕುಟುಂಬದಲ್ಲಿ ಹೆಂಗಸರು ಹೆದರಿಕೊಂಡಂಗೆ ನಾಟಕಮಾಡಿ ಒಳಗೆ ದೈರ್ಯವಾಗಿದ್ದುಕೊಂಡು ಬೇಕಾದಂಗೆ ಬಾಳುತ್ತಿದ್ದರು .. ನಾನು ಈಚೆ ಪ್ರತಿಭಟಿಸಿ , ಒಳಗೆ ಹೆದರಿ ಹೆದರಿ ಕೃಶವಾಗಿ ಹೋಗಿದ್ದೆ … ಅಷ್ಟೇ ವ್ಯತ್ಯಾಸ… ಕಪಟ ನಾಟಕ, ಮುಖವಾಡಗಳಿಗೆ ಇರುವ ಬೆಲೆ ನಿಜಕ್ಕೆ ಇಲ್ಲ !!!…. ಅತಿ ಸೂಕ್ಷ್ಮ ಆಗಿಬಿಟ್ಟಿತ್ತು ಮನಸು..
ಎಷ್ಟು ಜರ್ಝರಿತನಾಗಿರುವೆನೆಂದರೆ
ಬರೀ ಮುಟ್ಟಿದರೂ ಕಿತ್ತುಹೋಗುವೆ
ಇನ್ನೂ ಹೆಚ್ಚು ಹರಸಿದೆಯೆಂದರೆ
-ಸತ್ತು ಹೋಗುವೆ
ಅಂತ ದಿನಗಳಲ್ಲೇ , ಒಂದು ಇಂಟರ್ವ್ಯೂ ಅಟೆಂಡ್ ಮಾಡಿದಕ್ಕೆ, ಅತ್ತೆ ಅಸಾದ್ಯ ಜಗಳ ಮಾಡಿ ಬೈದ್ದಿದ್ದು ನ್ಯಾಯ ಪಂಚಾಯ್ತಿಯ ಮಾತು ಮತ್ತೆ ಬಂದಿದ್ದು.. ಅಂದು ರಾತ್ರಿ ಅವನಮ್ಮ ಮತ್ತು ಅಕ್ಕ ಸೇರಿಕೊಂಡು , ಮತ್ತೆ 15 ಜನರನ್ನು ಸೇರಿಸಿಕೊಂಡು ಪಂಚಾಯ್ತಿ ಏರ್ಪಡಿಸಿದ್ದಿದ್ದು ..ಈ ಬಾರಿ ಹೊಸ ಜನ !…ಮನೆಗೆ ಹೋಗುವವರೆಗೂ ನನಗೆ ಗೊತ್ತಿರಲಿಲ್ಲ ಪಂಚಾಯ್ತಿ ಇದೆ ಎಂದು…. ಮತ್ತೆ ಅದೇ ಕತೆಗಳು ಈ ಬಾರಿ ನಾನೋಗುವ ಮುಂಚೆಯೇ ಎಲ್ಲಾ ಜನರೆದುರು 2 -3 ಗಂಟೆಗಳಿಂದ ವಿವರಿಸಲ್ಪಟ್ಟಿತ್ತು — ‘ ಸೂಳೆ’ ಪಟ್ಟಕಟ್ಟಿ, ನಿಕೃಷ್ಟೇ ಮಾಡಿ , ಗಂಡಸರ ಬಾಯಲ್ಲಿ ಅದೆನ್ತದ್ದೋ ಮಾತುಗಳನೆಲ್ಲ ಆಡಿಸಿ,ಹೆಂಗಸರು ರುಡಾಲಿ ಎದ್ದು ಕೊಂದೇಹಾಕಿದರು …ಅತ್ಯಾಚಾರ ಮನಸಿನ ಮೇಲೆ…!!! ಪೋಲಿಸ್ ಕಂಪ್ಲೇಂಟ್ ಕೊಟ್ಟಿದ್ದು .. ಅದಕ್ಕೆ ನನ್ನ ಗಂಡ, ಈಗ ಸಿಕ್ಕಸಿಕ್ಕಲ್ಲಿ ಹೊಡೆಯಲು, ಸಾಯಿಸಲು ಹವಣಿಸುತ್ತ , ಡೈವೋರ್ಸ್ ಕೊಡು ನಿನ್ನ ಮೇಲೆ ನನಗೆ ಯಾವುದೇ ಪ್ರೀತಿ ಇಲ್ಲ, ನನ್ನ ಜೀವನ ನಾನು ನೋಡಿಕೊಳ್ಳಬೇಕು , ನೀ ಸತ್ತರು ನನಗೆ ಕಣ್ಣಲಿ ನೀರು ಬರುವುದಿಲ್ಲ ಎನ್ನುತ್ತಿರುವುದು !!!!!