ನಾಲ್ಕು ಗೋಡೆಯ ಮರೆಯಲ್ಲಿ
ನಿಂತು ಕೇಳಿದ್ದಿದ್ದರೆ
ಕೊಟ್ಟಿಬಿಟ್ಟಿರುತ್ತಿದ್ದೆ
ಸಣ್ಣದೊಂದು ಡಿವೋರ್ಸ್ ಏನು
ಪೂರ್ತಿ ಪ್ರಾಣ ಅವನಿಗೆ …
ಸಿಗಲಿಲ್ಲ ಎಂದು ಅಂಗಾಲಾಚಿದ್ದು ನಾ
ಕೇವಲ ಎರಡೇ ಎರಡು ಹನಿ ಪ್ರೀತಿ ..
ನೀಡಲಿಲ್ಲ ಎಂದು ದಾವೆ ಹೂಡುತ್ತಿರುವುದು ಅವ
ಅದೇ ಸುಡುಗಾಡು ಪ್ರೀತಿ ..
ಕೂತು ಒಮ್ಮೆಯೂ ಯೋಚಿಸಲ್ಲಿಲ್ಲ
ಕಂಡರೂ ಅರ್ಥಮಾಡಿಕೊಳ್ಳಲಿಲ್ಲ
ಕೇಳಿಯೂ ತಿಳಿದುಕೊಳ್ಳಲಿಲ್ಲ
ಪ್ರೀತಿ ತಡೆದ ಭೀತಿ….
ಆಶ್ಚರ್ಯ ನನಗೆ ಎಂದೂ ಅರಿವಿಗೆ
ಬಾರಲಿಲ್ಲವ ಅವನಿಗೆ
ತುಂಬಿದೆನ್ನೆದೆಯ ಈಚೆ
ಸ್ಪುರಿಸುತ್ತಿದ್ದ ಹಾಳು ಪ್ರೀತಿ !!!
ನಾನಂತು ಮುಗ್ದೆ ನಂಬಿ
ಇಳಿದಿದ್ದೆ
ಮುಳುಗಿ ತೇಲಿದ್ದೆ, ತೇಲಿ ಮುಳುಗಿದ್ದೆ
ನನ್ನ ಕನಸು , ಕನವರಿಕೆ
ಅವನ ಮಾತು , ಮೌನ,
ಸಿಟ್ಟು , ಸೆಡವು
ವೀರ್ಯ, ಸ್ಖಲನ,
ಒರಟು ಗಡ್ಡ,ಬಿರಿದ ತುಟಿ
ಮತ್ತೇನು ಕಾರಣ-ನೆಪ
ಬೇಕೇ ಇರಲಿಲ್ಲ ನನಗೆ ಸಾಕಾಗಿತ್ತಷ್ಟೇ
ಅವನು ಗಂಡಸು ಮತ್ತು ನನ್ನ ಗಂಡ!!!!
ಒಲ್ಲದ ಗಂಡನಿಗೆ ಸಾವಿರದ ಮೇಲಿದ್ದವು
ನೀವಾರಿಸಲಾಗದ ಮೊಸರಲ್ಲಿನ ಕಲ್ಲುಗಳು
ಶಿಲುಬೆಗೇರಿಸಿ ಮೊಳೆ ಜಡಿಯುತ್ತಿದ್ದ
ಬೇಯದ ಅಡಿಗೆ , ಮುಗಿಯದ ಸೇವೆ,
ಮಾಡದ ಮನೆಗೆಲಸ, ಬರೆದುಬಿಟ್ಟ ಕವನ
ಮೊಬೈಲು ಬಿಲ್ಲು ,ಕ್ರೆಡಿಟ್ಟು ಕಾರ್ಡು ,
ಅಕೌಂಟಿನ ದುಡ್ಡು ,ಪತ್ರದ ಮೇಲಿನ ಆಸ್ತಿ,
ಅಧಿಕಾರದ ಹೆಸರು, ಹಕ್ಕಿನ ಜರೂರತ್ತು
ಮೂವತ್ತು ದಿನದ ಮುಂದೆ
ತಪ್ಪದೆ ನರೆಯುವ ಮೈಯಿನ ರಜೆಯಷ್ಟೇ
ಕರಾರುವಕ್ಕು ಇಪ್ಪತ್ತು ದಿನಕ್ಕೆ
ಅವರು ನೆರೆದು ಸೇರಿಸುತಿದ್ದ ಪಂಚಾಯ್ತಿ
ಪ್ರತಿ ಚಕ್ರದಲ್ಲೂ ರಕ್ತ ಸ್ರಾವವಾದರು
ಏನೊಂದು ಆಗದೆ ಬದುಕುವ ಹೆಣ್ಣಂತೆ
ಇನ್ನೂ ಬದುಕುಳಿದಿರುವೆ
ಹಿಂದಿಂದೆ ಆದ ಅತ್ಯಾಚಾರ, ಹೃದಯಾಘಾತಗಳ
ತರುವಾಯವೂ
ಮೊದಲ ಹೊಡೆತಕ್ಕೆ ಹೈವೆಯಲ್ಲಿ
ನೆಲಕ್ಕೆ ಬಿದ್ದ ನಾಯಿಯ ಮೇಲೆ
ಮುಲಾಜಿಲ್ಲದೆ , ಕಣ್ಣಿಲ್ಲದೆ, ಕರುಣೆಯಿಲ್ಲದೆ
ಹರಿದಾಡಿದ ಕ್ರೂರ ವಾಹನಗಳ ನಾಲಿಗೆಗಳು
ಈಚೆ ಒಸರುತ್ತಿದ್ದದ್ದು ಕೇವಲ ಕೆಂಪು ರಕ್ತ , ಹಸಿಮಾಂಸ
ಕೊಳೆತ ವಾಸನೆಯಷ್ಟೇ ಅಲ್ಲಾ
ಅದೆಷ್ಟೋ ವರ್ಷ ಬಚಿಟ್ಟುಕೊಂಡಿದ್ದ ಮಾನ,
ಮರ್ಯಾದೆ,ನಗ್ನವಾದ ನಾಚಿಕೆ ….
ದೇಹದ ನಿಷ್ಠೆ ಸಾಬೀತಾಗಿತ್ತು
ಹಾಸಿಗೆ ಮೇಲೆ ಅವನಿಂದ ಹರಿದು
ಚೆಲ್ಲಿದ ರಕ್ತದಿಂದ
ಅದರ ನಂತರವೂ ಪರೀಕ್ಷಿಸುತ್ತಲೇ
ಇದ್ದನಲ್ಲ ನನ್ನ ‘ನಲ್ಲ’
ಅವನಿಗೆ ಕಾಣಿಸಬಲ್ಲದು ಹೇಗೆತಾನೆ
ಮನಸಿನ ನಿಷ್ಠೆ
ಇಷ್ಟಾದ ಮೇಲೂ ನೆನಪಿಗೆ ಬಾರದ ಹಿಂದೆ ಬಿದ್ದ ಹಳೆಯ ಗೆಳೆಯ ..
ಸಂಸ್ಕಾರ ಕೂಡ ಮಾಡಿಮುಗಿಸದೆ
ಬದುಕಿದ್ದಾಗಲೇ ಸಾಯಿಸಿ
ಬಿಸಾಡಿ ಹೊರಟು ಹೋದನಲ್ಲ
ದ್ವೇಷವಾದರು ಕಾಡಬೇಕಿತ್ತು
ಖಾನೂನು ಸುಲಭ , ಶಿಕ್ಷೆ ನಿಖರ
ಅಸಹಾಯಕತೆ ಅಲ್ಲವೇ ಅಲ್ಲ
ಕೂಡಿಬಾರದ ಶಕ್ತಿಯ ಹೆಸರು
ಅದೇ ಕಿತ್ತುಹೋದ ಅವನ ಮೇಲಿನ ಕೆಟ್ಟ ಪ್ರೀತಿ!!!!
ಎಲ್ಲಾ ಕಳಕೊಂಡ ನಾನು
compensation ಅಂತಲಾದರೂ
ಕೇಳಿ ಪಡೆಯಬೇಕು
ಚೂರು ಕಾಡದ ಪಾಪಪ್ರಜ್ಞೆ , ಆತ್ಮಸಾಕ್ಷಿಯ
ಜೊತೆ ತಾನೊಬ್ಬ ಮಾತ್ರ ಇನ್ನೂ
ಹಾಯಾಗಿ ಬದುಕಬೇಕು ಎನ್ನುವ ಸ್ವಾರ್ಥದಲ್ಲಿ
ದಯಪಾಲಿಸು
ಕಾಲಾಂಶ ಮಾತ್ರ
ನಷ್ಟವಾದ ಜೀವನ ಪ್ರೀತಿಯನ್ನ
ತುಂಬಿಕೊಳ್ಳುತ್ತೇನೆ..
ಇನ್ನೊಂದು ಬಾರಿ
ಮನುಷ್ಯರನ್ನು ನಂಬುತ್ತೇನೆ